ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆಗೊಳಪಡಬೇಕು

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಗರ್ಭಿಣಿ ಸ್ತ್ರೀಯರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆಗೊಳಪಡಬೇಕು ಮತ್ತು ತಾಯಿ ಮಗುವಿಗೆ ಮಾರಕವಾಗುವ ಎಚ್‌ಐವಿ, ಸಿಫಿಲಿಸ್ ಹೆಪಟೈಟಿಸ್ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕೊಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ದಡಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಹಾಗೂ ಎಚ್‌ಐವಿ ಸಿಫಿಲಿಸ್ ಹೆಪಟೈಟಿಸ್ ರೋಗಗಳ ಕುರಿತ ಮಾಹಿತಿ ಕಾರ್ಯಕ್ರಮ ದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ತಿಳಿಸಿದರು

ಗರ್ಭಿಣಿಯರಿಗೆ ಸೀಮಂತ, ಎಚ್.ಐ.ವಿ. ಬಗ್ಗೆ ಮಾಹಿತಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಗರ್ಭಿಣಿ ಸ್ತ್ರೀಯರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆಗೊಳಪಡಬೇಕು ಮತ್ತು ತಾಯಿ ಮಗುವಿಗೆ ಮಾರಕವಾಗುವ ಎಚ್‌ಐವಿ, ಸಿಫಿಲಿಸ್ ಹೆಪಟೈಟಿಸ್ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ತಿಳಿಸಿದರು. ಮಂಗಳವಾರ ಕೊಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ದಡಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಹಾಗೂ ಎಚ್‌ಐವಿ ಸಿಫಿಲಿಸ್ ಹೆಪಟೈಟಿಸ್ ರೋಗಗಳ ಕುರಿತ ಮಾಹಿತಿ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಆರೋಗ್ಯ ಇಲಾಖೆಯಲ್ಲಿ ಪ್ರತಿ ತಿಂಗಳ 9ನೇ ತಾರೀಖು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರ ತಪಾಸಣೆ ನಡೆಸಲಾಗುತ್ತದೆ. ಇದರ ಜೊತೆಯಲ್ಲಿ ತೊಡಕಿನ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಸಲಹೆ ನೀಡಲಾಗುತ್ತಿದೆ. ಗರ್ಭಿಣಿಯರಿಗೆ ನೀಡುವ ತಾಯಿ ಕಾರ್ಡಿನಲ್ಲಿ ತಪಾಸಣೆ ಲಸಿಕೆ ಹಾಗೂ ಇತರೆ ಸಮಗ್ರ ಮಾಹಿತಿ ಲಭ್ಯವಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ನಾರಾಯಣಸ್ವಾಮಿ ಆರೋಗ್ಯ ಇಲಾಖೆಯಲ್ಲಿ ಗರ್ಭಿಣಿಯರ ಆತ್ಮಸ್ಥೈರ್ಯ ತುಂಬುವ ಸೀಮಂತ ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ. ಇದೊಂದು ಮಾದರಿ ನಡೆ ಎಂದರು. ಮಹಿಳೆಯರು ಯಾವುದೇ ಸಂಧರ್ಭದಲ್ಲಿ ಭಯಪಡದೇ ಸಮಾಜದಲ್ಲಿ ಮುಂದೆ ಬರುವಂತೆ ಕರೆ ನೀಡಿದರು.

ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ ಸಂದೀಪ್ ಕುಮಾರ್ ಮಾತನಾಡಿ ಹೆರಿಗೆ ಸಮಯದಲ್ಲಿ ಭಯಪಡ ಬಾರದು. ಹೆರಿಗೆ ನೋವು ಬರುವವರೆಗೆ ಕಾಯಬೇಕು ವಿನಾಕಾರಣ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒತ್ತುಕೊಡದೆ ಸಾಮಾನ್ಯ ಹೆರಿಗೆ ಮಾಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಸೀಮಂತದಲ್ಲಿ ಸುಮಾರಿ 38 ಗರ್ಭಿಣಿಯರು ಭಾಗವಹಿಸಿದ್ದು ಮಹಿಳಾ ಸಿಬ್ಬಂದಿ ಅರಿಶಿನ ಕುಂಕುಮ ಹಚ್ಚಿ, ಹೂ ಮುಡಿಸಿ ಫಲತಾಂಬೂಲ ನೀಡಿ ಶುಭ ಹಾರೈಸಿದರು.

ವಕೀಲರಾದ ಸುಚೇತಾ, ಗೌತಮಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್, ಹಿರಿಯ ಪಿಎಚ್‌ಸಿಒ ವಾಗೇಶ್ವರಿ, ಐಸಿಟಿಸಿ ಕೇಂದ್ರದ ಸಚಿನ್, ವೆಂಕಟೇಶ್, ಎಚ್.ಐ.ಒ ಶ್ರೀಹರ್ಷ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

Share this article