ರಾಮಮಂದಿರ ಮಂತ್ರಾಕ್ಷತೆ ವಿತರಿಸಿದ ಶಾಸಕ ಪ್ರಭು ಚವ್ಹಾಣ್‌

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಆಯೋಧ್ಯೆಯಲ್ಲಿನ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಶಾಸಕ ಪ್ರಭು ಚವ್ಹಾಣ್‌ ಮಂಗಳವಾರ ಔರಾದ್‌ (ಬಿ) ಪಟ್ಟಣದ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಿಸಿದರು.

ಔರಾದ್: ಆಯೋಧ್ಯೆಯಲ್ಲಿನ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಶಾಸಕ ಪ್ರಭು ಚವ್ಹಾಣ್‌ ಮಂಗಳವಾರ ಔರಾದ್‌ (ಬಿ) ಪಟ್ಟಣದ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಿಸಿದರು.

ಬೋಂತಿ ತಾಂಡಾ ನಿವಾಸದಲ್ಲಿ ಶ್ರೀರಾಮ ಭಾವಚಿತ್ರ ಹಾಗೂ ರಾಮಭಕ್ತರಿಂದ ಸ್ವೀಕರಿಸಿದ ಮಂತ್ರಾಕ್ಷತೆಗೆ ಪೂಜೆ ನೆರವೇರಿಸಿ ಔರಾದ್‌ ಪಟ್ಟಣಕ್ಕೆ ಆಗಮಿಸಿದ ಶಾಸಕರು, ಅಗ್ನಿ ಬಸವಣ್ಣ ದೇವಸ್ಥಾದಲ್ಲಿ ಪೂಜೆ ನೆರವೇರಿಸುವ ಮೂಲಕ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಪಟ್ಟಣದ ಹಲವು ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಾಗೂ ಕರಪತ್ರಗಳನ್ನು ಹಂಚಿ ಮಾತನಾಡಿ, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಕೋಟ್ಯಂತರ ಹಿಂದುಗಳ ಅನೇಕ ವರ್ಷಗಳ ಬೇಡಿಕೆಯಾಗಿತ್ತು, ಈ ಕನಸು ಈಗ ಸಾಕಾರಗೊಳ್ಳುತ್ತಿದೆ ಎಂದರು.

ರಾಮಜನ್ಮ ಭೂಮಿ ಆಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದೆ. ಅಂದು ದೇಶದ ಎಲ್ಲ ಕಡೆಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಪೂಜೆ, ಅರ್ಚನೆ, ಹೋಮ-ಹವನ, ಸತ್ಸಂಗ, ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಔರಾದ್‌ ಮಂಡಲದಿಂದ ಮನೆ ಮನೆಗೆ ತೆರಳಿ ಆಮಂತ್ರಣ ನೀಡಲಾಗುತ್ತಿದೆ. ಆ ದಿನ ಪ್ರತಿ ಮನೆಯಲ್ಲಿ ದೀಪಗಳನ್ನು ಉರಿಸಿ, ಕುಟುಂಬದ ಸದಸ್ಯರೆಲ್ಲರೂ ಸೇರಿ ಪೂಜೆ ಮಾಡಬೇಕು. ದೀಪಾವಳಿ ಮಾದರಿಯಲ್ಲಿ ಹಬ್ಬವನ್ನು ಆಚರಿಸಿ ಸಂಭ್ರಮಿಸಬೇಕೆಂದು ಮನವಿ ಮಾಡಿದರು.

ಶ್ರೀರಾಮ ಪ್ರಾಣಪ್ರತಿಷ್ಠಾಪನೆ ದಿನದಂದು ಎಲ್ಲ ಕಡೆಗಳಲ್ಲಿ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ ಪೂಜೆ ನೆರವೇರಿಸಿ ದೀಪ ಉರಿಸಬೇಕು. ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಎಲ್ಲ ಮನೆಗಳಿಗೆ ಭೇಟಿ ನೀಡಿ ಈ ವಿಷಯವನ್ನು ತಿಳಿಸಬೇಕು. ಅಂದು ಎಲ್ಲ ಮನೆಗಳಲ್ಲಿ ಸಂಭ್ರಮದ ವಾತಾವರಣ ಇರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ದೊಂಡಿಭಾ ನರೋಟೆ, ಖಂಡೋಬಾ ಕಂಗಟೆ, ರಾಮರೆಡ್ಡಿ ಪಾಟೀಲ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ, ಸಂತೋಷ ಪೋಲಕವಾರ, ಪ್ರಕಾಶ ಅಲ್ಮಾಜೆ, ಕೇರಬಾ ಪವಾರ್, ರಮೇಶ ಬಿರಾದಾರ, ರಾಜಕುಮಾರ ಸೋರಾಳೆ, ಸಚಿನ ರಾಠೋಡ, ರವೀಂದ್ರ ರೆಡ್ಡಿ, ಜಗದೀಶ ಪಾಟೀಲ, ಧನಾಜಿ ರಾಠೋಡ, ಸಂಜು ಮುರ್ಕೆ, ಸಚಿನ ಬಿರಾದಾರ, ವಸಂತ ರಾಠೋಡ, ಗಜಾನಂದ ವಟಗೆ, ಸಂಜು ಒಡೆಯರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article