ಕನ್ನಡಪ್ರಭ ವಾರ್ತೆ ಮಂಗಳೂರು
ತುಳು ರಂಗಭೂಮಿಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಕಂಡು ಅತ್ಯಧಿಕ ಪ್ರೇಕ್ಷಕರು ವೀಕ್ಷಿಸಿ ದಾಖಲೆ ನಿರ್ಮಿಸಿರುವ ‘ಶಿವದೂತೆ ಗುಳಿಗೆ’ ನಾಟಕದ 555 ಪ್ರದರ್ಶನದ ಸಂಭ್ರಮ ಕಾರ್ಯಕ್ರಮ ಜ.11ರಂದು ಸಂಜೆ 5 ಗಂಟೆಗೆ ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ. ಪ್ರಸ್ತುತ ತುಳು, ಕನ್ನಡದಲ್ಲಿ ಪ್ರದರ್ಶನವಾಗುತ್ತಿರುವ ಈ ನಾಟಕವನ್ನು ಮುಂದೆ ಪಂಚ ಭಾಷೆಗಳಲ್ಲಿ ಪ್ರದರ್ಶನ ನಡೆಸಲು ಸಿದ್ಧತೆ ನಡೆಸಲಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಾಟಕದ ನಿರ್ದೇಶಕ, ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್, ‘ಶಿವದೂತೆ ಗುಳಿಗೆ’ ನಾಟಕದ ಮೊದಲ ಪ್ರದರ್ಶನ 2020ರ ಜನವರಿ 2ರಂದು ಮಂಗಳೂರು ಪುರಭವನದಲ್ಲಿ ನಡೆದಿತ್ತು. ಪ್ರೇಕ್ಷಕರು ಕೈಹಿಡಿದಿದ್ದರಿಂದ ಇಷ್ಟು ಪ್ರದರ್ಶನಗಳನ್ನು ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿದರು.555ನೇ ಸಂಭ್ರಮ ಕಾರ್ಯಕ್ರಮವನ್ನು ವಿನಯ ಗುರೂಜಿ ಉದ್ಘಾಟಿಸಲಿದ್ದು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಐಕಳ ಹರೀಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ಆರ್.ಕೆ.ನಾಯರ್, ಪದ್ಮರಾಜ್ ಆರ್., ಮನೋಹರ ಪ್ರಸಾದ್, ಬಿ. ನಾಗರಾಜ ಶೆಟ್ಟಿ, ಎಸ್.ಮಹೇಶ್ ಕುಮಾರ್, ಕುಮಾರ್ ಎನ್.ಬಂಗೇರ, ಕಾಸರಗೋಡು ಚಿನ್ನಾ, ಪ್ರಕಾಶ್ ಪಾಂಡೇಶ್ವರ್, ಹರೀಶ್ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಪತ್ರಕರ್ತ, ರಂಗಕರ್ಮಿ ಪರಮಾನಂದ ವಿ.ಸಾಲಿಯಾನ್ ಅವರಿಗೆ 2024ನೇ ವರ್ಷದ ದಿ. ವನಿತಾ ಆನಂದ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಟಕದ ತೆರೆ ಮತ್ತು ತೆರೆಯ ಹಿಂದೆ 70-80 ಮಂದಿಯ ಶ್ರಮವಿದ್ದು, ಅವರೆಲ್ಲರನ್ನೂ ಗೌರವಿಸಲಾಗುವುದು ಎಂದರು.ತಾರಾ ಮೆರುಗು: ಸಮಾರಂಭದಲ್ಲಿ ಚಿತ್ರರಂಗದ ಪ್ರಮುಖರಾದ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ರಕ್ಷಿತ್ ಶೆಟ್ಟಿ, ಗುರುಕಿರಣ್, ಅನುಶ್ರೀ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ‘ಶಿವದೂತೆ ಗುಳಿಗೆ’ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತ ಎಂದು ವಿಜಯಕುಮಾರ್ ಕೊಡಿಯಾಲಬೈಲ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ನಟರಾದ ಸ್ವರಾಜ್ ಶೆಟ್ಟಿ, ರಜಿತ್ ಕದ್ರಿ, ಸಂಗೀತ ನಿರ್ದೇಶಕ ಎ.ಕೆ. ವಿಜಯ್ ಕೋಕಿಲ, ಪ್ರಮುಖರಾದ ಚಂದ್ರ ಕೊಡಿಯಾಲ್ ಬೈಲ್, ಪ್ರೇಮ್ ಶೆಟ್ಟಿಸುರತ್ಕಲ್, ನಿತೇಶ್ ಪೂಜಾರಿ ಏಳಿಂಜೆ, ಹಿತೇಶ್ ಮಂಗಳೂರು ಇದ್ದರು.ಪಂಚ ಭಾಷೆಗಳಲ್ಲಿ ಪ್ರದರ್ಶನಕ್ಕೆ ಸಿದ್ಧತೆ: ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳು ಮಾತ್ರವಲ್ಲದೆ, ಕೇರಳ, ದುಬೈ, ಮಸ್ಕತ್, ಬಹ್ರೇನ್, ಮುಂಬೈ, ಪೂನಾ, ನಾಸಿಕ್, ಗುಜರಾತ್, ಬರೋಡ ಮತ್ತಿತರ ಕಡೆಗಳಲ್ಲೂ ‘ಶಿವದೂತೆ ಗುಳಿಗೆ’ ನಾಟಕ ಯಶಸ್ವಿಯಾಗಿ ಪ್ರದರ್ಶನವಾಗಿದೆ. ಪ್ರಸ್ತುತ ತುಳು ಮತ್ತು ಕನ್ನಡದಲ್ಲಿ ನಾಟಕ ಪ್ರದರ್ಶನ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಲಯಾಳಂ, ಮರಾಠಿ, ಇಂಗ್ಲಿಷ್‌ನಲ್ಲೂ ಪ್ರದರ್ಶನ ನೀಡಲು ಸಿದ್ಧತೆ ನಡೆಸಲಾಗುತ್ತಿದ್ದು, 1 ಸಾವಿರ ಪ್ರದರ್ಶನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಕೊಡಿಯಾಲ್‌ಬೈಲ್ ತಿಳಿಸಿದರು.