ಬಿಡುಗಡೆ ಬೆನ್ನಲ್ಲೇ ಮತ್ತೆ ಟಿಎ ನಾರಾಯಣಗೌಡ ಜೈಲಿಗೆ

KannadaprabhaNewsNetwork |  
Published : Jan 10, 2024, 01:45 AM ISTUpdated : Jan 10, 2024, 12:14 PM IST
ಕರವೇ ನಾರಾಯಣಗೌಡಗೆ ಜೈಲು | Kannada Prabha

ಸಾರಾಂಶ

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮತ್ತೆ ಅವರನ್ನು ಬಂಧಿಸಲಾಗಿದೆ.

ಕನ್ನಪಡ್ರಭ ವಾರ್ತೆ ಬೆಂಗಳೂರು

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಮತ್ತೆ ಅವರನ್ನು ಬಂಧಿಸಲಾಗಿದೆ. 

ಕೋರ್ಟ್‌ ಜಾಮೀನು ನೀಡಿದ್ದರಿಂದ ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಮಂಗಳವಾರ ನಾರಾಯಣಗೌಡ ಬಿಡುಗಡೆಯಾದರು. ಆದರೆ, ಸಾರ್ವಜನಿಕ ಆಸ್ತಿಗೆ ಹಾನಿ ಆರೋಪದ ಮೇಲೆ 2017ರಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ ಕಾರಣಕ್ಕೆ ಅವರ ವಿರುದ್ಧ ವಾರಂಟ್‌ ಜಾರಿಯಾಗಿತ್ತು. 

ಇದರಿಂದ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಅವರನ್ನು ನಗರದ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದರು. ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಗರದ 30ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. 

ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.ಈ ಸಂಬಂಧ ನಾರಾಯಣಗೌಡ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಇದಕ್ಕೂ ಮುನ್ನ ವಿಚಾರಣೆ ವೇಳೆ ನಾರಾಯಣಗೌಡ ಪರ ವಕೀಲರು, ಪೊಲೀಸರ ನಿರ್ಲಕ್ಷ್ಯದಿಂದ ವಾರಂಟ್‌ ಜಾರಿಯಾಗಿದೆ. 

ಅರ್ಜಿದಾರರು ಪ್ರತಿ ದಿನ ಎಲ್ಲರಿಗೂ ಸಿಗುವಂತಹ ವ್ಯಕ್ತಿ. ಅವರು ತಲೆಮರೆಸಿಕೊಂಡು ಹೋಗುವಂತಹ ವ್ಯಕ್ತಿಯಲ್ಲ. ವಾರಂಟ್‌ ಜಾರಿಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದಿದ್ದರೆ ಸ್ವತಃ ಅವರೇ ನ್ಯಾಯಾಲಯಕ್ಕೆ ತಪ್ಪದೇ ಹಾಜರಾಗುತ್ತಿದ್ದರು. 

ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ಮಂಜೂರು ಮಾಡುವಂತೆ ಕೋರಿದರು.ಈ ವಾದವನ್ನು ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ಅರ್ಜಿದಾರರಿಗೆ 2017ರಲ್ಲಿ ಜಾಮೀನು ದೊರೆತಿದೆ. ಬಳಿಕ ನಿಗದಿತ ದಿನಾಂಕಕ್ಕೆ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅರ್ಜಿದಾರರು ಕೋರ್ಟ್‌ಗೆ ಹಾಜರಾಗದೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. 

ಕೋರ್ಟ್‌ ವಿಚಾರಣೆಗೆ ಹಾಜರಾಗಬೇಕೆಂಬ ಅರಿವು ಅವರಿಗೆ ಇರಬೇಕಿತ್ತು. ಆದ್ದರಿಂದ ಜಾಮೀನು ನೀಡಬಾರದು ಎಂದು ಕೋರಿದರುಅದಕ್ಕೆ ಉತ್ತರಿಸಿದ ನಾರಾಯಣಗೌಡ ಪರ ವಕೀಲರು, ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ನ್ಯಾಯಾಲಯ ನೀಡಿದ್ದ ಸಮನ್ಸ್ ಅನ್ನು ಪೊಲೀಸರು ಅರ್ಜಿದಾರರಿಗೆ ತಲುಪಿಸಿಲ್ಲ. 

ಇದರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹಾಗಾಗಿ, ಜಾಮೀನು ಮಂಜೂರು ಮಾಡಬೇಕು. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತನ್ನು ತಪ್ಪದೇ ಪಾಲಿಸಲಾಗುವುದು ಎಂದು ಭರವಸೆ ನೀಡಿದರು. ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಬುಧವಾರ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ಇದೇ ವೇಳೆ ಅನಾರೋಗ್ಯಕ್ಕೆ ಗುರಿಯಾಗಿರುವ ಅರ್ಜಿದಾರರಿಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಲ್ಪಿಸುವಂತೆ ಪೊಲೀಸರಿಗೆ ಸೂಚಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''