ಜೋಶಿ ವಿರುದ್ಧ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ ಕಸರತ್ತು!

KannadaprabhaNewsNetwork | Published : Mar 20, 2024 1:17 AM

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹುಡುಕಾಟದ ಪ್ರಕ್ರಿಯೆ ಪಕ್ಷದಲ್ಲಿ ಕಳೆದ ಆರು ತಿಂಗಳಿಂದಲೂ ನಡೆಯುತ್ತಿದೆ. ಇದೀಗ ಚುನಾವಣೆ ಘೋಷಣೆಯಾದರೂ ಹುರಿಯಾಳು ಯಾರು ಎಂದು ಘೋಷಣೆ ಮಾಡಲು ಕಾಂಗ್ರೆಸ್‌ ತೀವ್ರ ಕಸರತ್ತು ನಡೆಸಿದೆ.

ಬಸವರಾಜ ಹಿರೇಮಠ

ಧಾರವಾಡ:ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹುಡುಕಾಟದ ಪ್ರಕ್ರಿಯೆ ಪಕ್ಷದಲ್ಲಿ ಕಳೆದ ಆರು ತಿಂಗಳಿಂದಲೂ ನಡೆಯುತ್ತಿದೆ. ಇದೀಗ ಚುನಾವಣೆ ಘೋಷಣೆಯಾದರೂ ಹುರಿಯಾಳು ಯಾರು ಎಂದು ಘೋಷಣೆ ಮಾಡಲು ಕಾಂಗ್ರೆಸ್‌ ತೀವ್ರ ಕಸರತ್ತು ನಡೆಸಿದೆ.

ನಿರೀಕ್ಷೆಯಂತೆ ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ ಜೋಶಿ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದು ಈಗಾಗಲೇ ಎಲ್ಲ ತಾಲೂಕುಗಳಲ್ಲಿ ಕಚೇರಿ ಸೇರಿದಂತೆ ಸಭೆ-ಸಮಾರಂಭಗಳ ಮೂಲಕ ಭರ್ಜರಿ ಚುನಾವಣಾ ಸಿದ್ಧತೆಗಳನ್ನು ನಡೆಸಿದ್ದಾರೆ. ಜೊತೆಗೆ ಬರೋಬ್ಬರಿ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸುವುದಾಗಿಯೂ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲವು ಸಾಧಿಸಿರುವ ಜೋಶಿ ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕೆಂದು ಕೈ ವರಿಷ್ಠರು ತೀವ್ರ ಲೆಕ್ಕಾಚಾರ ಹಾಕುತ್ತಿದ್ದಾರೆ.

ಆರು ತಿಂಗಳಿಂದ ಹುಡುಕಾಟ:

ಆರು ತಿಂಗಳ ಹಿಂದೆಯೇ ಅಭ್ಯರ್ಥಿ ಆಯ್ಕೆಗಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಉಸ್ತುವಾರಿ ಮಾಡಿದ್ದರು. ಅವರು ಸಹ ಸಭೆ ನಡೆಸಿ ಆಕಾಂಕ್ಷಿಗಳ ಪಟ್ಟಿ ಸೇರಿದಂತೆ ಕ್ಷೇತ್ರದ ಸ್ಥಿತಿ-ಗತಿ ಬಗ್ಗೆ ಮಾಹಿತಿಯನ್ನು ವರಿಷ್ಠರಿಗೆ ನೀಡಿದ್ದರು. ಇಷ್ಟಾಗಿಯೂ ಅಭ್ಯರ್ಥಿ ಆಯ್ಕೆ ಮಾತ್ರ ವಿಳಂಬವಾಗುತ್ತಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ. ಆರಂಭದಲ್ಲಿ ಬಸವರಾಜ ಗುರಿಕಾರ, ಅನಿಲಕುಮಾರ ಪಾಟೀಲ, ಡಾ. ಮಯೂರ ಮೋರೆ, ಶರಣಪ್ಪ ಕೊಟಗಿ, ಶಾಕೀರ ಸನದಿ, ಶಿವಲೀಲಾ ವಿನಯ ಕುಲಕರ್ಣಿ, ವಿನೋದ ಅಸೂಟಿ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಪ್ರಸ್ತುತ ವಿನೋದ ಅಸೂಟಿ ಹಾಗೂ ಶಿವಲೀಲಾ ಕುಲಕರ್ಣಿ ಇಬ್ಬರ ಹೆಸರುಗಳು ಮಾತ್ರ ಕೇಳಿ ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ಇಬ್ಬರ ಪೈಕಿ ಒಬ್ಬರ ಹೆಸರು ಇಂದು ಅಥವಾ ನಾಳೆ ಘೋಷಣೆಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಏತಕ್ಕೆ ಶಿವಲೀಲಾ?:

ಶಿವಲೀಲಾ ಅವರು ಹಾಲಿ ಶಾಸಕ ವಿನಯ ಕುಲಕರ್ಣಿ ಪತ್ನಿ. ಪತಿ ಜತೆಗೆ ಹಲವು ಚುನಾವಣೆ ಎದುರಿಸಿದ ಅನುಭವ ಇದೆ. ಪ್ರಕರಣವೊಂದರಲ್ಲಿ ವಿನಯ ಕುಲಕರ್ಣಿ ಕ್ಷೇತ್ರದ ಹೊರಗಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪತಿ ಗೆಲ್ಲಿಸುವಲ್ಲಿ ಶಿವಲೀಲಾ ಪ್ರಮುಖ ಪಾತ್ರ ವಹಿಸಿದ್ದಾರೆ. ಮೇಲಾಗಿ ಬಹುಸಂಖ್ಯಾತ ಲಿಂಗಾಯತ ಸಮುದಾಯದವರು. ಮಹಿಳಾ ಅಭ್ಯರ್ಥಿಯಾಗುವ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು ಓಲೈಸಬಹುದು ಎಂಬ ಲೆಕ್ಕಾಚಾರವೂ ಇದೆ. ಜತೆಗೆ ಕ್ಷೇತ್ರದಲ್ಲಿ ನಾಲ್ಕು ಜನ ಶಾಸಕರು ಕಾಂಗ್ರೆಸ್ಸಿನವರು. ಶಿಗ್ಗಾಂವಿ ಕ್ಷೇತ್ರದಲ್ಲೂ ವಿನಯ ಕುಲಕರ್ಣಿ ಒಡನಾಟ ಸಾಕಷ್ಟಿದೆ. ಅಲ್ಲಿ ಹೆಚ್ಚಿನ ಮುಸ್ಲಿಂ ಮತಗಳಿದ್ದು ಕಾಂಗ್ರೆಸ್ಸಿಗೆ ಅದು ಸಹಕಾರಿ ಆಗಬಹುದು. ಹಾಗೆಯೇ, ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರಿಗೂ ಕ್ಷೇತ್ರ ಗೆಲ್ಲಿಸಿಕೊಡಬೇಕೆಂಬ ಒತ್ತಡವೂ ಇದೆ. ಈ ಎಲ್ಲ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಶಿವಲೀಲಾ ಕುಲಕರ್ಣಿ ಅವರನ್ನೇ ಅಖೈರುಗೊಳಿಸಬೇಕೆಂದು ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ಪಕ್ಷದ ಮುಖಂಡರೊಬ್ಬರು ಮಾಹಿತಿ ನೀಡಿದರು.

ಯಾರಿವರು ಅಸೂಟಿ:

ವಿನೋದ ಅಸೂಟಿ ಯುವ ಕಾಂಗ್ರೆಸ್‌ ಮುಖಂಡರು. ಧಾರವಾಡ ಲೋಕಸಭೆಗೆ ಅವರ ಹೆಸರೇ ಅಂತಿಮವಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೂ ಆಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಸೋಲು ಅನುಭವಿಸಿದರೂ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಬಂದ ಎಚ್‌.ಎಚ್‌. ಕೋನರಡ್ಡಿಗೆ ಸಹಕರಿಸಿ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿ ಈಚೆಗೆ ಅವರಿಗೆ ರಾಜ್ಯ ಸರ್ಕಾರದ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನವೂ ಒಲಿದಿದೆ. ಹಿಂದುಳಿದ ವರ್ಗಕ್ಕೆ ಸೇರಿದ ಅಸೂಟಿ ಸಂಘಟಕರಾಗಿದ್ದು ಅವರ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿಯೂ ಇದೆ.

ಡಾ. ನಾಲವಾಡ ಪ್ರಯತ್ನ:ಇನ್ನು, ಬಿಜೆಪಿಯಿಂದ ಕೈ ಹಿಡಿದ ಲಿಂಗಾಯತ ಮುಖಂಡ ಮೋಹನ ಲಿಂಬಿಕಾಯಿ ಹೆಸರು ಆಗಾಗ ಕೇಳಿ ಬರುತ್ತಿದೆ. ಜೊತೆಗೆ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಕಳೆದ ಆರು ತಿಂಗಳಿಂದ ಹಾವೇರಿಯಲ್ಲಿ ಚುನಾವಣೆಯ ಸಿದ್ಧತೆ ಮಾಡಿಕೊಂಡು ಅಂತಿಮ ಹಂತದಲ್ಲಿ ಹಾವೇರಿ ಟಿಕೆಟ್‌ ಬಸವರಾಜ ಬೊಮ್ಮಾಯಿಗೆ ಆಗಿದ್ದು, ಡಾ. ಮಹೇಶ ನಾಲವಾಡ ಬಿಜೆಪಿ ವಿರುದ್ಧ ತೀವ್ರ ಅಸಮಧಾನಗೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಟಿಕೆಟ್‌ಗಾಗಿ ಪಕ್ಷದ ಬಾಗಿಲು ಬಡಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಕೊನೆ ಹಂತದಲ್ಲಿ ಪಕ್ಷದ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಈಗಾಗಲೇ ಕ್ಷೇತ್ರದಾದ್ಯಂತ ಒಂದು ಬಾರಿ ಪ್ರದಕ್ಷಿಣೆ ಹಾಕಿದ್ದು ಒಂದು ಹಂತದ ಪ್ರಚಾರ ಕಾರ್ಯ ಮುಗಿಸಿದ್ದಾರೆ. ಆದರೆ, ಕೈ ಅಭ್ಯರ್ಥಿ ಇನ್ನೂ ಘೋಷಣೆಯಾಗದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಹ ತೀವ್ರ ಕುತೂಹಲದಿಂದ ಆದಷ್ಟು ಶೀಘ್ರ ಹೆಸರು ಘೋಷಣೆ ಮಾಡಿದರೆ ಅಭ್ಯರ್ಥಿ ಪ್ರಚಾರ ಕಾರ್ಯಕ್ಕೆ ಅನುಕೂಲ ಆಗಬಹುದು ಎಂದು ಕಾಂಗ್ರೆಸ್‌ ಮುಖಂಡರು ಕಾತುರದಿಂದ ಕಾಯುತ್ತಿದ್ದಾರೆ.

Share this article