ಸಂಸದರ ಮನೆಗೆ ಮುತ್ತಿಗೆ ಹಾಕುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ

KannadaprabhaNewsNetwork |  
Published : Apr 19, 2025, 12:46 AM IST
ಪೋಟೋ: 18ಎಸ್‌ಎಂಜಿಕೆಪಿ01ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಯುವ ಮೋರ್ಚಾ ಬಿಜೆಪಿ ವತಿಯಿಂದ ಶುಕ್ರವಾರ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರತಿಭಟನೆ ನಡೆಯಿತು.  | Kannada Prabha

ಸಾರಾಂಶ

Congress lacks the morals to lay siege to MPs' homes

-ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷ ಪ್ರಶಾಂತ್‌ಕುಕ್ಕೆ ಕಿಡಿ । ಶಿವಮೊಗ್ಗದಲ್ಲಿ ಯುವ ಮೋರ್ಚಾ ಬಿಜೆಪಿಯಿಂದ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರತಿಭಟನೆ

-----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಸಂಸದರ ಮನೆಗೆ ಮುತ್ತಿಗೆ ಹಾಕುವ ಯಾವುದೇ ನೈತಿಕತೆ ಕಾಂಗ್ರೆಸ್ಸಿಗರಿಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಧಿನಾಯಕಿ ಮತ್ತು ರಾಹುಲ್‌ಗಾಂಧಿ ವಿರುದ್ಧ ಮೊದಲು ಪ್ರತಿಭಟನೆ ಮಾಡಲಿ ಎಂದು ಜಿಲ್ಲಾ ಯುವ ಬಿಜೆಪಿ ಅಧ್ಯಕ್ಷ ಪ್ರಶಾಂತ್‌ಕುಕ್ಕೆ ಕಿಡಿಕಾರಿದರು.

ಕಾಂಗ್ರೆಸ್‌ ನಾಯಕರ ವಿರುದ್ಧ ಶಿವಪ್ಪನಾಯಕ ವೃತ್ತದಲ್ಲಿ ಯುವ ಮೋರ್ಚಾ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಕಾನೂನು ಹೋರಾಟ ಮಾಡುವುದು ಬಿಟ್ಟು ನ್ಯಾಯಾಲಯದ ಆದೇಶಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಂಸದ ಬಿ.ವೈ.ಆರ್.ಮನೆಗೆ ಮತ್ತು ಅಂಚೆ ಕಚೇರಿಗೆ ನುಗ್ಗಲು ಯತ್ನಿಸಿರುವುದು ಸರಿಯಲ್ಲ ಎಂದು ದೂರಿದರು.

ಭ್ರಷ್ಟಚಾರದ ಮೂಲವೇ ಆಗಿರುವ ಕಾಂಗ್ರೆಸ್ ಆಡಳಿತ ಕಾಲದಲ್ಲಿ ನಡೆದಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಗರಣ ದೇಶಕ್ಕೆ ಮಾಡಿದ ದ್ರೋಹ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ದೇಶದ ಜನತೆ ಕಾಂಗ್ರೆಸ್‌ನ್ನು ನಂಬಿ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ವಿಶ್ವಾಸದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಹೂಡಿಕೆ ಮಾಡಿದರು. ಆದರೆ, ಆ ಹಣವನ್ನು ಕಾಂಗ್ರೆಸ್ ತನ್ನದೇ ಕುಟುಂಬದ ಚಾರಿಟಬಲ್ ಟ್ರಸ್ಟ್‌ಗೆ ವರ್ಗಾಯಿಸಿ ದೇಶಕ್ಕೆ ವಿಶ್ವಾಸ ದ್ರೋಹ ಮಾಡಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಾರದು ಎನ್ನುವುದು ಸಂವಿಧಾನ ವಿರೋಧಿ ಧೋರಣೆ ಎಂದು ಆರೋಪಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕಾಂಗ್ರೆಸ್‌ನವರು ನೆಲದಿಂದ ಆಕಾಶದವರೆಗೆ ಅನೇಕ ಭ್ರಷ್ಟಚಾರಗಳನ್ನು ಮಾಡಿ ದೇಶ ಲೂಟಿ ಮಾಡಿದವರು. ಒಂದು ವರ್ಗದ ಓಲೈಕೆಗಾಗಿ ದೇಶವನ್ನೇ ಭ್ರಷ್ಟಚಾರದ ಕೂಪವಾಗಿಸಿದವರು. ಈಗ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶದ ಜನತೆ ನೀಡಿದ ಹಣವನ್ನು ಭ್ರಷ್ಟಚಾರದಿಂದ ನುಂಗಿದ್ದಾರೆ. ಮೊದಲು ಅವರು ಜನತೆಯ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ಕರ್ನಾಟಕ ಕಾಂಗ್ರೆಸ್ಸಿಗರು ಕೇಂದ್ರ ಕಾಂಗ್ರೆಸ್ ನಾಯಕರ ಗುಲಾಮರಾಗಿದ್ದಾರೆ. ಒಂದು ಕುಟುಂಬದ ಚಾಕರಿಗೆ ನಿಂತಿದ್ದಾರೆ. ಸತ್ಯವನ್ನು ತಿಳಿಯುವ ಗೋಜಿಗೂ ಕಾಂಗ್ರೆಸ್ ಕಾರ್ಯಕರ್ತರು ಹೋಗುವುದಿಲ್ಲ. ಪೋಟೋ ಹೋರಾಟ ಮಾಡಿದ ತಕ್ಷಣ ಬಿಜೆಪಿ ಕಾರ್ಯಕರ್ತರು ಬೆದರುವುದಿಲ್ಲ ಎಂದು ಕುಟುಕಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮಾಡುವುದಾಗಿ ಸಾವಿರಾರು ಕೋಟಿ ಹಣವನ್ನು ದೇಶದ ನಾಗರಿಕರಿಂದ ಸಂಗ್ರಹಿಸಿ ಅದನ್ನು ಎಂಗ್ ಇಂಡಿಯಾ ಎಂಬ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿ ಅಕ್ರಮವಾಗಿ ಹಣ ವರ್ಗಾವಣೆಯನ್ನು ಆ ಟ್ರಸ್ಟಿಗೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.37ರಷ್ಟು ಸೋನಿಯಾ ಗಾಂಧಿ ಹಾಗೂ ಶೇ.37 ರಾಜೀವ್‌ಗಾಂಧಿ ಪಾಲುದಾರರಾಗಿದ್ದು, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಇತರ ನಾಯಕರು ಇದರಲ್ಲಿ ಪಾಲುದಾರರಾಗಿದ್ದಾರೆ. ಇದು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಂಗ್ರೆಸ್ ಮಾಡಿದ ಅವಮಾನ ಎಂದು ದೂರಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಭ್ರಷ್ಟಚಾರ ಸಂಬಂಧಿಸಿದಂತೆ ನ್ಯಾಯಾಲಯಾದಲ್ಲಿ ದೂರು ದಾಖಲಿಸಿದ್ದು ಬಿಜೆಪಿ ಪಕ್ಷವಲ್ಲ, ಡಾ.ಸುಬ್ರಹ್ಮಣ್ಯ ಸ್ವಾಮಿ ಎಂಬ ನಾಯಕರು. ಇದನ್ನು ಮೊದಲು ಕಾಂಗ್ರೆಸ್ ಅರಿತುಕೊಳ್ಳಬೇಕು. ಆಮೇಲೆ ಬಿಜೆಪಿಯ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಕುಟುಕಿದರು.

ಪತ್ರಿಭಟನೆಯಲ್ಲಿ ಪ್ರಮುಖರಾದ ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

-------------------

ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಯುವ ಮೋರ್ಚಾ ಬಿಜೆಪಿಯಿಂದ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರತಿಭಟನೆ ನಡೆಯಿತು.

ಪೋಟೋ: 18ಎಸ್‌ಎಂಜಿಕೆಪಿ01

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ