ಓಟ್‌ ಚೋರಿ ಬಗ್ಗೆ ಮಾತನಾಡೋ ನೈತಿಕತೆ ಕಾಂಗ್ರೆಸ್‌ಗಿಲ್ಲ

KannadaprabhaNewsNetwork |  
Published : Nov 11, 2025, 01:30 AM IST
10ಕೆಡಿವಿಜಿ2-ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದೇಶದಲ್ಲಿ ಮತಗಳ್ಳತನ ಆರಂಭಿಸಿದ ಕಾಂಗ್ರೆಸ್ ಪಕ್ಷ ದಶಕಗಳ ಕಾಲ ಆಡಳಿತ ನಡೆಸಿದ್ದು, ಇಂತಹ ಪಕ್ಷಕ್ಕೆ ಮತ ಚೋರಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯೇ ಇಲ್ಲ ಎಂದು ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

- ಇಂದಿರಾ ಗಾಂಧಿ ಮತಗಳ್ಳತನ ಮಾಡಿ, ಜೈಲು ಪಾಲಾಗುವ ಸ್ಥಿತಿ ಬಂದಿತ್ತು: ರೇಣುಕಾಚಾರ್ಯ ಟಾಂಗ್ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಮತಗಳ್ಳತನ ಆರಂಭಿಸಿದ ಕಾಂಗ್ರೆಸ್ ಪಕ್ಷ ದಶಕಗಳ ಕಾಲ ಆಡಳಿತ ನಡೆಸಿದ್ದು, ಇಂತಹ ಪಕ್ಷಕ್ಕೆ ಮತ ಚೋರಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯೇ ಇಲ್ಲ ಎಂದು ಬಿಜೆಪಿಯ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಗಳ್ಳತನ ಮಾಡಿದ್ದರಿಂದಲೇ ಕಾಂಗ್ರೆಸ್ ಪಕ್ಷವು ದಶಕಗಳ ಆಡಳಿತ ನಡೆಸಲು ಸಾಧ್ಯವಾಗಿದೆ. ಚುನಾವಣಾ ಅಕ್ರಮದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಸಾಬೀತಾಗಿದ್ದರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಲೋಕಸಭೆ ಸದಸ್ಯತ್ವ ಕಳೆದುಕೊಂಡು, ಜೈಲಿಗೆ ಹೋಗುವಂತಹ ಪರಿಸ್ಥಿತಿ ಬಂದಿದ್ದನ್ನು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರು ಮರೆಯಬಾರದು ಎಂದರು.

ಭೂತದ ಬಾಯಿಯಲ್ಲಿ ಭಗವದ್ಗೀತೆ:

ಜೈಲು ತಪ್ಪಿಸಿಕೊಳ್ಳಲೆಂದೇ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದನ್ನೂ ಜನತೆ ಎಂದಿಗೂ ಮರೆತಿಲ್ಲ. ಇಂತಹ ನಾಯಕಿಯ ಮೊಮ್ಮಗ ಈಗ ಕೇಂದ್ರ ಚುನಾವಣಾ ಆಯೋಗ ವಿರುದ್ಧ ಮಾಡಿರುವ ಆರೋಪಗಳು ಭೂತದ ಬಾಯಿಯಲ್ಲಿ ಭಗವದ್ಗೀತೆ ಎಂಬಂತಿದೆ. ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಈಗ ಅದರ ಮೇಲೆ ಯಾವುದೇ ಸರ್ಕಾರ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ನಾಯಕರೇ ಉತ್ತರಿಸಲಿ:

ಬಿಜೆಪಿ ಮತಗಳ್ಳತನ ಮಾಡಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ 136 ಕ್ಷೇತ್ರ ಗೆದ್ದು, ಅಧಿಕಾರಕ್ಕೆ ಬರುತ್ತಿರಲಿಲ್ಲ. ಬಿಜೆಪಿಯೇ ಮತ್ತೆ ಅಧಿಕಾರದಲ್ಲಿರುತ್ತಿತ್ತು. ಕನಕಪುರ ಕ್ಷೇತ್ರದಿಂದ ಡಿ.ಕೆ. ಶಿವಕುಮಾರ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದಿದ್ದು ಮತಗಳ್ಳತನವೇ? ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ 40 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು ಮತಗಳ್ಳತನವೇ ಎಂಬುದಕ್ಕೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿನ ನಾಯಕರೇ ಉತ್ತರಿಸಲಿ ಎಂದು ರೇಣುಕಾಚಾರ್ಯ ತಿಳಿಸಿದರು.

ರಾಗಾ ಹಿಟ್ ಅಂಡ್ ರನ್ ಗಿರಾಕಿ:

ಈ ಹಿಂದೆ ಸಿದ್ದರಾಮಯ್ಯ ಆಪ್ತ ಸಿ.ಎಂ. ಇಬ್ರಾಹಿಂ 3 ಸಾವಿರ ಮತಗಳನ್ನು ಖರೀದಿಸಿದ್ದಾಗಿ ಹೇಳಿದ್ದರು. ಅದರ ಬಗ್ಗೆ ರಾಹುಲ್ ಗಾಂಧಿ ಮೌನವಿರುವುದು ಏಕೆ? ರಾಹುಲ್ ಗಾಂಧಿ ಮಾತುಗಳನ್ನೇ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ನಂಬುವುದಿಲ್ಲ. ರಾಹುಲ್ ಗಾಂಧಿ ಹಿಟ್ ಅಂಡ್ ರನ್ ಗಿರಾಕಿ ಎಂಬುದು ಕಾಂಗ್ರೆಸಿಗರೆಲ್ಲರಿಗೂ ಗೊತ್ತು. ಇತ್ತ ಸಿದ್ದರಾಮಯ್ಯ ಕುರ್ಚಿ ಕಳೆದುಕೊಳ್ಳುವ ಭಯದಲ್ಲಿದ್ದರೆ, ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗಲು ಮತಗಳ್ಳತನದ ವಿರುದ್ಧ ಸಹಿ ಸಂಗ್ರಹಿಸುವ ಪ್ರಯತ್ನ ಶುರು ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಭ್ರಮೆಯಲ್ಲಿ ಸಿಎಂ:

ಕಾಂಗ್ರೆಸ್‌ನವರಿಗಿಂತ 3 ಪಟ್ಟು ಸಹಿ ಸಂಗ್ರಹಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಓಟ್ ಚೋರಿ ಆರೋಪ ನಿಜವಾಗಿದ್ದರೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗ ಅಥವಾ ನ್ಯಾಯಾಲಯಕ್ಕೆ ದೂರು ಕೊಡಲಿ. ಬಿಹಾರ ಚುನಾವಣಾ ಫಲಿತಾಂಶ ಬಂದ ನಂತರ ಕಾಂಗ್ರೆಸ್ಸಿಗರ ಇಂತಹ ನಾಟಕಗಳೆಲ್ಲಾ ಮುಗಿಯುತ್ತವೆ. ಗ್ಯಾರಂಟಿ ಭ್ರಮೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ರಾಜ್ಯವನ್ನು ನರಕದ ಸ್ಥಿತಿಗೆ ತಳ್ಳಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತಿವೆ. ರಾಜ್ಯ ರಾಜಕೀಯದಲ್ಲಿ ಬಿರುಕು ಕಾಣುತ್ತಿದೆ. ಒಳಜಗಳದಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗುತ್ತದೆಂದು ಸ್ವತಃ ಅದೇ ಪಕ್ಷದ ನಾಯಕರು ಹೇಳುತ್ತಿದ್ದಾರೆ ಎಂದು ಕುಟುಕಿದರು.

ನಾನು ಮುಂಚೆಯೇ ಹೇಳಿದ್ದಂತೆ ನ.26ರ ಒಳಗಾಗಿ ಕಾಂಗ್ರೆಸ್ ಸರ್ಕಾರ ಪತನ ನಿಶ್ಚಿತ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಧ್ಯೆ ಸಿಎಂ ಕುರ್ಚಿಗಾಗಿ ಮುಸುಕಿನ ಮುಸುಕನ ಗುದ್ದಾಟ, ಒಳ ಜಗಳದಿಂದಾಗಿಯೇ ಇನ್ನು 15-16 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ ಖಚಿತ. ಕಾದು ನೋಡಿ ಅಷ್ಟೇ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದರು.

ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ ಇತರರು ಇದ್ದರು.

- - -

(ಕೋಟ್‌)

ಆರ್‌ಎಸ್‌ಎಸ್‌ ಪಥ ಸಂಚಲನ ವಿರೋಧಿಸಿ ಸರ್ಕಾರಕ್ಕೆ ಪತ್ರ ಬರೆದವರು, ನ್ಯಾಯಾಲಯಕ್ಕೆ ಓಡಿದವರು ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ನಮಾಜ್ ಮಾಡಿದ್ದರ ಬಗ್ಗೆ ಯಾಕೆ ಮೌನವಾಗಿದ್ದಾರೆ? ಸರ್ಕಾರದ ನಿಯಮ ಎಲ್ಲರಿಗೂ ಒಂದೇ ರೀತಿ ಅನ್ವಯಿಸಬೇಕಲ್ಲವೇ? ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡುವುದು ಸರಿಯಲ್ಲ. ಇಂತಹ ಘಟನೆಗಳ ವಿರುದ್ಧ ಸರ್ಕಾರ ಮೊದಲು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷದು ದ್ವಂದ್ವ ನೀತಿ. ಇದು ರಣಹೇಡಿ ಸರ್ಕಾರ.

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ

- - -

-10ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ನಿರಂತರ ಸಾಧನೆಯಿಂದ ಯಶಸ್ಸುಸಾಧ್ಯ
15ರಂದು ಬೆಂಗಳೂರಿಗೆ ಎಸ್‌ಪಿ ವರಿಷ್ಠ ಅಖಿಲೇಶ ಯಾದವ್