ಸಿಎಂ, ಡಿಸಿಎಂ ಜತೆ ಕಾಂಗ್ರೆಸ್‌ ವರಿಷ್ಠರ ಗುಪ್ತ ಮಾತುಕತೆ

KannadaprabhaNewsNetwork | Published : May 21, 2025 12:04 AM
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ವಿಜಯನಗರದ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಸುದೀರ್ಘ ಚರ್ಚೆ ನಡೆಸಿದರು. ವರಿಷ್ಠರ ಜತೆಗಿನ ರಾಜ್ಯ ನಾಯಕರ ಚರ್ಚೆ ಇದೀಗ ತೀವ್ರ ಕುತೂಹಲ ಮೂಡಿಸಿದೆ.
Follow Us

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ವಿಜಯನಗರದ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಸುದೀರ್ಘ ಚರ್ಚೆ ನಡೆಸಿದರು. ವರಿಷ್ಠರ ಜತೆಗಿನ ರಾಜ್ಯ ನಾಯಕರ ಚರ್ಚೆ ಇದೀಗ ತೀವ್ರ ಕುತೂಹಲ ಮೂಡಿಸಿದೆ.

ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿ ಐದು ಮಂದಿ ನಾಯಕರು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ಇತರೆ ನಾಯಕರು, ಭದ್ರತಾ ಸಿಬ್ಬಂದಿ, ಆಪ್ತ ಸಹಾಯಕರನ್ನು ಹೊರಗಿಟ್ಟು ಸುಮಾರು 40 ನಿಮಿಷ ಕಾಲ ಗಂಭೀರ ಮಾತುಕತೆ ನಡೆಸಿದರು ಎನ್ನಲಾಗಿದೆ. ಆದರೆ, ಯಾವ ವಿಚಾರದ ಬಗ್ಗೆ ಚರ್ಚೆಯಾಗಿದೆ ಎಂಬುದು ಬಹಿರಂಗಗೊಂಡಿಲ್ಲ.

ಮೂಲಗಳ ಪ್ರಕಾರ ರಾಜ್ಯದಲ್ಲಿ ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿಗಣತಿ) ಅನುಷ್ಠಾನದ ಬಗ್ಗೆ ವರಿಷ್ಠರು ಚರ್ಚಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿದ್ದು, ಆದಷ್ಟು ಬೇಗ ಅನುಷ್ಠಾನ ಮಾಡಿ ತನ್ಮೂಲಕ ಕೇಂದ್ರದ ಮೇಲೆ ಒತ್ತಡ ಹಾಕುವ ಬಗ್ಗೆ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ರಾಹುಲ್‌ ಗಾಂಧಿ ಅವರು ಜಾತಿಗಣತಿ ಜಾರಿ ಬಗ್ಗೆ ಉತ್ಸುಕರಾಗಿದ್ದಾರೆ. ಜಾತಿಗಣತಿ ಬಗ್ಗೆ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಈಗಾಗಲೇ ತೆಲಂಗಾಣದಲ್ಲಿ ಜಾರಿ ಮಾಡಲಾಗಿದೆ. ಇದೇ ರೀತಿ ರಾಜ್ಯದಲ್ಲೂ ಜಾರಿ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಚರ್ಚೆಯಾಗಿದೆ.

ಆದರೆ, ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿ ಮಾಡಿದರೆ ಮೇಲ್ವರ್ಗದ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಬಗ್ಗೆ ಗೊಂದಲಗಳಿವೆ. ಹೀಗಾಗಿ ಮೊದಲು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕುರಿತ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಒಳ ಮೀಸಲಾತಿ ಸಂಬಂಧ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷಾ ವರದಿಯಲ್ಲಿ ಬರುವ ಅಂಕಿ-ಅಂಶಗಳು ಹಾಗೂ ಕಾಂತರಾಜು, ಜಯಪ್ರಕಾಶ್ ಹೆಗ್ಡೆ ಆಯೋಗಗಳ ಜಾತಿಗಣತಿ ವರದಿಯ ಅಂಕಿ-ಅಂಶಗಳು ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಅಂಕಿ-ಅಂಶ ಹೊಂದಾಣಿಕೆಯಾದರೆ ಜಾತಿ ಗಣತಿ ವರದಿ ಜಾರಿಗೆ ಅನುಕೂಲ ವಾತಾವರಣ ಉಂಟಾಗಲಿದೆ ಎಂದು ಪಂಚ ನಾಯಕರು ಚರ್ಚಿಸಿರುವುದಾಗಿ ತಿಳಿದುಬಂದಿದೆ.