ಸಿಕ್ಕ ಹಣವೆಲ್ಲ ನನ್ನದೆಂದು ಹೇಳಲು ಐಟಿ ಒತ್ತಡ: ಡಿಕೆಶಿ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ನಮ್ಮ ನಾಯಕರನ್ನು ಹೆದರಿಸಿ ಅವರ ಬಳಿ ಸಿಕ್ಕ ಹಣ ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ.ಶಿವಕುಮಾರ್ ಅವರ ಹಣ ಎಂದು ಹೇಳಲು ಒತ್ತಾಯ ಮಾಡುತ್ತಿದ್ದಾರೆ  

KannadaprabhaNewsNetwork | Published : Apr 25, 2024 7:15 PM IST / Updated: Apr 26 2024, 08:37 AM IST

 ಬೆಂಗಳೂರು :  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ನಮ್ಮ ನಾಯಕರನ್ನು ಹೆದರಿಸಿ ಅವರ ಬಳಿ ಸಿಕ್ಕ ಹಣ ಕಾಂಗ್ರೆಸ್ ಪಕ್ಷ ಹಾಗೂ ಡಿ.ಕೆ.ಶಿವಕುಮಾರ್ ಅವರ ಹಣ ಎಂದು ಹೇಳಲು ಒತ್ತಾಯ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲೇ ಹೆಚ್ಚಿನ ದಾಳಿ ನಡೆಸುತ್ತಿದ್ದಾರೆ. ನಮ್ಮ ನಾಯಕರ ಮೇಲೆ ದಾಳಿ ಮಾಡಿ ಇಡೀ ದಿನ ಅವರನ್ನು ಕೂರಿಸಿಕೊಂಡು ಆ ನಾಯಕರು ಚುನಾವಣೆ ಮಾಡದಂತೆ ತಡೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.

ಐಟಿ ಅಧಿಕಾರಿಗಳು ಬಿಜೆಪಿಯ ಯಾವುದಾದರೂ ಒಬ್ಬ ನಾಯಕರ ಮನೆಗೆ ಹೋಗಿದ್ದಾರಾ? ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? ಆದರೂ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಸೋಲಿನ ಭೀತಿಯಿಂದ ಬಿಜೆಪಿಯು ಸಾಂವಿಧಾನ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.ಕಾಂಗ್ರೆಸ್‌ಗೆ ಬೆಂಬಲಿಸಿ:

ಶುಕ್ರವಾರ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಮುಂದೆಯೂ ಪ್ರತಿಯೊಬ್ಬರ ಬದುಕು ಬದಲಾವಣೆ ತರಲು ಕೆಲಸ ಮಾಡಲಿದೆ. ನಮ್ಮ ಕಾಂಗ್ರೆಸ್ ಪಕ್ಷ ಮಹಾಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ವಾರ್ಷಿಕ 1 ಲಕ್ಷ, 25 ಲಕ್ಷ ವರೆಗೂ ಆರೋಗ್ಯ ವಿಮೆ, ನಿರುದ್ಯೋಗಿಗಳಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ, ನಗರದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುತ್ತೇವೆ. ಮತದಾರರು ಈ ಭರವಸೆಗಳ ಬಗ್ಗೆ ಆಲೋಚಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ಜನರೂ ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಜನರು ಭಾರಿ ಪ್ರಮಾಣದ ಬೆಂಬಲ ನೀಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article