ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಜೆಡಿಎಸ್ ಸದೃಢವಾಗಿದೆ. ಚುನಾವಣೆ ಎದುರಿಸಲು ಸಿದ್ಧವಾಗಿದೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿಯ ಅಭಿವೃದ್ಧಿ ಯೋಜನೆಯ ಹಣವನ್ನು ದುರುಪಯೋಗಪಡಿಸಿಕೊಂಡು ಲೂಟಿ ಮಾಡುತ್ತಿದೆ. ರಾಜ್ಯದಲ್ಲಿ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ ಸಾಲ ₹27 ಸಾವಿರ ಕೋಟಿ ಮನ್ನಾ ಮಾಡಿದರೆ, ಕಾಂಗ್ರೆಸ್ ಸರ್ಕಾರದಲ್ಲಿ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ದೇವೇಗೌಡರು ಪ್ರಧಾನಿಯಾಗಿದ್ದಾಗ ಕೃಷ್ಣಾ ಕೊಳ್ಳದ ಎಲ್ಲ ರೈತರ ನೋವು ಪರಿಗಣಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎರಡೂ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿದರು. ಆದರೆ, ಅಧಿಕಾರಕ್ಕಾಗಿ ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಕಳೆದ 10 ವರ್ಷದಿಂದ ಆಡಳಿತ ನಡೆಸುತ್ತಿದ್ದರೂ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಇವತ್ತಿಗೂ ಪೂರ್ಣಗೊಳಿಸಲಾಗಿಲ್ಲ. ಪ್ರಾರಂಭಿಕ ಹಂತದ ₹17 ಸಾವಿರ ಕೋಟಿ ಯೋಜನೆಯ ವೆಚ್ಚ ಈಗ ₹87 ಸಾವಿರ ಕೋಟಿಗೇರಿದೆ. ಲೂಟಿಯ ನಡುವೆ ರೈತರ ಯೋಜನೆಗಳು ಕಾಂಗ್ರೆಸ್‌ಗೆ ನೆನಪಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಶಾಸಕ ನೇಮಿರಾಜ್ ನಾಯ್ಕ ಮಾತನಾಡಿ, ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಹಣ ಒದಗಿಸಲಾಗುತ್ತಿಲ್ಲ. ವಸತಿಹೀನರ ಸಮಸ್ಯೆಗಳಿಗೆ ಕಿವಿಯಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಬಿಡಿಗಾಸಿನ ಸಹಾಯವೂ ದೊರೆತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಕೊಟ್ಟೂರಿನ ಜಿಪಂ ಮಾಜಿ ಸದಸ್ಯ ಹರ್ಷವರ್ಧನ್, ಮಾಜಿ ಸಚಿವ ನಾಡಗೌಡರು, ಮಾಜಿ ಶಾಸಕ ಶಿವಶಂಕರ್ ಮಾತನಾಡಿದರು.
ಇದಕ್ಕೂ ಮುನ್ನ ಪಟ್ಟಣದ ನೀರಾವರಿ ಇಲಾಖೆಯಿಂದ ತೆರೆದ ವಾಹನದಲ್ಲಿ ನಿಖಿಲ್ ಕುಮಾರಸ್ವಾಮಿ ಸಹಿತ ಬಹುತೇಕ ಪಕ್ಷದ ಮುಖಂಡರು ಸಮಾವೇಶದತ್ತ ತೆರಳಿದಾಗ ಸಾವಿರಾರು ಕಾರ್ಯಕರ್ತರು ಬೈಕ್ ರ‍್ಯಾಲಿ, ಆಟೋ ರ‍್ಯಾಲಿ ನಡೆಸಿದರು. ವಿವಿಧೆಡೆ ಪಕ್ಷದ ಮುಖಂಡರ ಮೇಲೆ ಹೂವಿನ ಸುರಿಮಳೆಗೈಯಲಾಯಿತು.ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ತಾಲೂಕು ಘಟಕದ ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ್, ಹೊಳಗುಂದಿ ಶೇಖರಪ್ಪ, ಕೊಟ್ರೇಶ್ ತಳವಾರ್ ಚಿಂತ್ರಪಳ್ಳಿ ಮತ್ತಿತರರಿದ್ದರು. 20 ಸಾವಿರಕ್ಕೂ ಹೆಚ್ಚು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ, ಕಡ್ಲಬಾಳು ಗವಿ, ಶಿಕ್ಷಕ ಶಿವಶಂಕರ ಕಾರ್ಯಕ್ರಮ ನಿರ್ವಹಿಸಿದರು.