ಪುರಸಭೆ ಅಧಿಕಾರಕ್ಕೇರಲು ಕಾಂಗ್ರೆಸ್ ಕಸರತ್ತು; ಬಿಜೆಪಿಯಿಂದ ತಂತ್ರಗಾರಿಕೆ

KannadaprabhaNewsNetwork |  
Published : Oct 20, 2026, 02:00 AM IST
ಗಜೇಂದ್ರಗಡ ಪುರಸಭೆ | Kannada Prabha

ಸಾರಾಂಶ

ಪುರಸಭೆಯ ಅಧಿಕಾರ ಹಿಡಿಯುವ ಕಾಂಗ್ರೆಸ್-ಬಿಜೆಪಿ ಪೈಪೋಟಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಾ ಬಂದಿದೆ.

ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ವೇಳೆಯಲ್ಲಿ ಆಂತರಿಕ ಕಚ್ಚಾಟ ಹೆಚ್ಚಳ ಸಾಧ್ಯತೆ

ಎಸ್.ಎಂ. ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪುರಸಭೆಯ ಅಧಿಕಾರ ಹಿಡಿಯುವ ಕಾಂಗ್ರೆಸ್-ಬಿಜೆಪಿ ಪೈಪೋಟಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಾ ಬಂದಿದೆ. ಬಿಜೆಪಿ ಸದಸ್ಯರು ಕಾಂಗ್ರೆಸ್ ಬೆಂಬಲಿಸಿ ಕೊನೆಯ ಆಡಳಿತ ಅವಧಿ ಕಾಂಗ್ರೆಸ್ ಪಾಲಾಗಿದ್ದನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ತಂತ್ರಗಾರಿಕೆ ನಡೆಸುತ್ತಿದ್ದೂ, ಸದಸ್ಯರ ಸಂಖ್ಯಾಬಲ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ ಅಧಿಕಾರಕ್ಕೇರಲು ಕಸರತ್ತು ನಡೆಸಿದೆ.

ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಚಿಂತನೆಯಲ್ಲಿ ರಾಜ್ಯ ಸರ್ಕಾರವಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವಿಗಾಗಿ ರಾಜಕೀಯ ಪಕ್ಷಗಳು ಮಗ್ನವಾಗಿದ್ದು, ಮೀಸಲಾತಿ ಪರಿಣಾಮ ಟಿಕೆಟ್ ಗಿಟ್ಟಿಸಿಕೊಳ್ಳಲು ಕಾರ್ಯಕರ್ತರು ತಮ್ಮದೇ ಲೆಕ್ಕಾಚಾರದಲ್ಲಿ ಮುಳುಗಿದ್ದು, ರಾಜಕೀಯ ಚರ್ಚೆಗಳು ಹಬ್ಬದ ಸಂಭ್ರಮವನ್ನು ತರಿಸಿವೆ.

ಪಟ್ಟಣದ ೨೩ ವಾರ್ಡ್‌ಗಳಿಗೆ ನಡೆದ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ೫ ಹಾಗೂ ಬಿಜೆಪಿ ೧೮ ವಾರ್ಡ್‌ಗಳಲ್ಲಿ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಿಜೆಪಿ ಅಧಿಕಾರ ಹಿಡಿದಿತ್ತು. ಆದರೆ ಕೊನೆಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಬಿಜೆಪಿಯ ೭ ಸದಸ್ಯರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಸದಸ್ಯರ ಸಂಖ್ಯಾಬಲ ಹೆಚ್ಚಿಸಿಕೊಂಡ ಕಾಂಗ್ರೆಸ್ ಪುರಸಭೆ ಅಧಿಕಾರ ಹಿಡಿದಿತ್ತು. ಹೀಗಾಗಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದೆ ಎಂಬ ಗುಸುಗುಸುಗಳಿವೆ. ಇದಕ್ಕೆ ಬಿಜೆಪಿ ಸಹ ಅಧಿಕಾರ ಹಿಡಿಯಲು ರಣತಂತ್ರ ರೂಪಿಸುತ್ತಿದೆ. ಆದರೆ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ವೇಳೆಯಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಲಿದ್ದು, ಗೆಲ್ಲುವ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂಬ ಚರ್ಚೆಗಳು ಕೇಳಿ ಬರುತ್ತಿವೆ.

ವಾರ್ಡ್‌ವಾರು ಮೀಸಲಾತಿ ಬದಲಾಗುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿ ಕೆಲ ಆಕಾಂಕ್ಷಿಗಳು ಈಗಿನಿಂದಲೇ ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಬಿಜೆಪಿ ತೊರೆದು ಕೆಲ ನಾಯಕರು ಬಂದಿದ್ದರು. ಅಲ್ಲದೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಕೆಲ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಬೆಂಬಲ ಸೂಚಿಸಿದ್ದರು. ಮುಂದಿನ ಪುರಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮುಳಗಿದ್ದರೆ, ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗೆ ಮಾಡಲು ಬಿಜೆಪಿ ರಣತಂತ್ರ ಹೆಣೆಯುತ್ತಿದ್ದು, ಪುರಸಭೆ ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿ ಪೂರಕ ವಾತವಾರಣ ನಿರ್ಮಿಸಿಕೊಳ್ಳುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ: ಆರನೇ ವರ್ಷದ ಸಾರ್ವಜನಿಕ ಆಯುಧಪೂಜೆ ಇಂದು
ಮೈಸೂರು ಕೊಡಗು ಗೌಡ ಸಮಾಜ ಕಾವೇರಿ ತೀರ್ಥ ವಿತರಣೆ