ಹಳಿಯಾಳ: ಹಿಂದೂಗಳಲ್ಲಿ ಮೂಡುತ್ತಿರುವ ಒಗ್ಗಟ್ಟಿನಿಂದ ದೇಶದ್ರೋಹಿ ಹಾಗೂ ಹಿಂದೂ ವಿರೋಧಿ ಶಕ್ತಿಗಳು ಕಂಗೆಟ್ಟಿವೆ. ನಮ್ಮಲ್ಲಿ ಒಡಕು ಮೂಡಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರಗಳು ನಡೆಯುತ್ತಿವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದರು.
ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತಿದ್ದು, ಹಿಂದೂ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಇದನ್ನು ಸಹಿಸಿಕೊಳ್ಳದ ಕೆಲವರು ಹತಾಶರಾಗಿದ್ದಾರೆ ಎಂದು ಖಾರವಾಗಿ ನುಡಿದರು.
ಕೆಲವು ವರ್ಷಗಳ ಹಿಂದೆ ಹಿಂದೂಗಳಿಗೆ ತಮ್ಮ ಹಬ್ಬ ಹರಿದಿನಗಳನ್ನು ಆಚರಿಸಲು ಹಾಗೂ ಕೇಸರಿ ಶಾಲು ಧರಿಸಲು ಹಿಂಜರಿಯುವಂಥ ಪರಿಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಂದು ಜಾತಿ, ಪಂಗಡ ಎಂಬ ಭೇದವಿಲ್ಲದೆ ವಸುಧೈವ ಕುಟುಂಬಕಂ ತತ್ವದಡಿ ಎಲ್ಲರೂ ಒಂದಾಗುತ್ತಿದ್ದಾರೆ ಎಂದರು.ನಮ್ಮ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಧಕ್ಕೆ ಬಂದಾಗ ಜಾತಿ ಭೇದ ಮರೆತು ಧರ್ಮಯುದ್ಧಕ್ಕೆ ಸಜ್ಜಾಗಬೇಕು ಎಂದ ಅವರು, ಮಹಾನ್ ಪುರುಷರ ತ್ಯಾಗ, ಬಲಿದಾನದಿಂದ ಹಿಂದೂ ಧರ್ಮ ಬಲಿಷ್ಠವಾಗಿ ನೆಲೆಯೂರಿದೆ. ಮುಂದೆಯೂ ಒಗ್ಗಟ್ಟು ಅನಿವಾರ್ಯ ಎಂದರು.
ಬಿಜೆಪಿ ಯುವ ಮುಖಂಡ ನಾಗರಾಜ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಮುರ್ಕವಾಡ ಸೇರಿದಂತೆ ತಾಲೂಕಿನೆಲ್ಲೆಡೆ ನವರಾತ್ರಿಯ ದುರ್ಗಾ ದೌಡ್ ಮೂಲಕ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಯುವಕ- ಯುವತಿಯರು ಧರ್ಮ ರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು.