ಹರಪನಹಳ್ಳಿ: ತಾಲೂಕಿನ ಗೋವೆರಹಳ್ಳಿ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಯಲ್ಲಾಪುರ ಗ್ರಾಮದ ಕಾಂಗ್ರೆಸ್ ಯುವ ಮುಖಂಡ ಕೆ. ಕೆಂಚಪ್ಪ ಸ್ಪಂದಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಎರಡು ಕೊಳವೆಬಾವಿ ಕೊರೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗ್ರಾಮದಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ 4 ಇಂಚು ಹಾಗೂ ಹರಿಜನ ಕಾಲನಿಯಲ್ಲಿ ಕೊರೆಸಿದ ಕೊಳವೆ ಬಾವಿಯಲ್ಲಿ 2.5 ಇಂಚು ನೀರು ಲಭ್ಯವಾಗಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಸ್ವಂತ ಆಸಕ್ತಿಯಿಂದ ಕೊಳವೆಬಾವಿ ಕೊರೆಸಿರುವ ಕೆ.ಕೆಂಚಪ್ಪ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗೋವೆರಹಳ್ಳಿ ಗ್ರಾಮದ ವಿಎಸ್ಎಸ್ಎನ್ ಅಧ್ಯಕ್ಷ ಎಂ.ಕೆಂಚಪ್ಪ ಗ್ರಾಪಂ ಸದಸ್ಯ ಪರಶುರಾಮ್, ಯಲ್ಲಾಪುರ ಗ್ರಾಮದ ಮುತ್ತಣ್ಣ, ಎಂ. ರಾಜಶೇಖರ್, ವೈ.ಕೆಂಚಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಅಲಮರಸೀಕೆರೆ ಬಸವರಾಜ, ಗೌಳಿ ಬಸವರಾಜ, ಮಟ್ಟಿ ಸಂತೋಷ್, ಕೆ. ಹನುಮಂತಪ್ಪ, ಕೆ.ಎಂ. ರಾಜಶೇಖರ್ ಸೇರಿದಂತೆ ಇತರರು ಇದ್ದರು.