ಬಿ.ರಾಮಪ್ರಸಾದ್ ಗಾಂಧಿ ಹರಪನಹಳ್ಳಿ
ನಗರಸಭೆ ಮುಂಭಾಗ, ಗೌಳೇರ ಪೇಟೆ, ಟಾಕೀಸ್ ರಸ್ತೆ, ಹೊಸ ಬಸ್ ನಿಲ್ದಾಣದ ಸುತ್ತಮುತ್ತ ಹೂವು, ಹಣ್ಣು, ಕಾಯಿ, ಬಾಳೆಕಂಬ, ಬೂದು ಗುಂಬಳ ಕಾಯಿ ಖರೀದಿ ಜೋರು ನಡೆದಿತ್ತು, ಸೇವಂತಿ ಹೂವು ಒಂದು ಮಾರಿಗೆ ₹100 ರಿಂದ ₹150, ಚಿಕ್ಕ ಬೂದುಗುಂಬಳಕಾಯಿಗೆ ₹80-100 ಹೀಗೆ ಎಲ್ಲವೂ ತುಟ್ಟಿಯಾಗಿದ್ದವು.
ಆದರೆ ಜನರು ತಮ್ಮ ಮನೆ, ಅಂಗಡಿ ಮುಂತಾದ ಕಡೆ ಖಂಡೆ ಪೂಜೆ ಹಾಗೂ ತಮ್ಮ ವಾಹನಗಳಿಗೆ ಪೂಜೆ ನೆರವೇರಿಸಲು ಖರೀದಿಯಲ್ಲಿ ತಲ್ಲೀನರಾಗಿದ್ದರು. ಬಟ್ಟೆ ಅಂಗಡಿಗಳು ಗಿಜಿಗುಟ್ಟುತ್ತಿದ್ದವು, ಆದರೆ ಜ್ಯುವೆಲ್ಲರಿ ಶಾಪ್ ಗಳು ಮಾತ್ರ ಅಷ್ಟೊಂದು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದವು.ಸರ್ಕಾರ ಬರ ಎಂದು ಮಾತ್ರ ಘೋಷಣೆ ಮಾಡಿದೆ, ಬರ ಪರಿಹಾರ ಸೇರಿದಂತೆ ಬರಕ್ಕೆ ಸಂಬಂಧಪಟ್ಟಂತೆ ಇನ್ನೂ ಯಾವುದೇ ನೆರವಿಗೆ ಮುಂದಾಗಿಲ್ಲ, ಆದರೂ ಜನರು ದಸರಾ ಹಬ್ಬದಲ್ಲಿ ದುರ್ಗೆ ಪೂಜೆಗೆ ಹಿಂದೆ ಸರಿದಿಲ್ಲ ಎಂಬುದು ಕಾಣುತ್ತಿದೆ.
ಸೇವಂತಿ ಹೂವು ಹಾಕಿದವರು ಅಂತರ ಜಲ ಕಡಿಮೆಯಾಗಿ ಕೊಳವೆ ಬಾವಿ ಬಹಳಷ್ಟು ಕೆಳಕ್ಕೆ ಹೋಗಿದ್ದರೂ ಸ್ವಲ್ಪ ನೀರಿನಲ್ಲಿ ಇಳುವರಿ ಕಡಿಯೆಯಾಗಿದ್ದರೂ ದಸರಾ ಬಂದಿದ್ದರಿಂದ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ, ಒಂದು ಕಿಲೋಗೆ ₹150 ರಿಂದ ₹200 ದೊರಕಿದೆ. ಶೃಂಗಾರ ತೋಟ, ಕಸವನಹಳ್ಳಿ, ನಿಚ್ಚವನಹಳ್ಳಿ, ಹರಿಯಮ್ಮನಹಳ್ಳಿ, ಜೋಷಿಲಿಂಗಾಪುರ ಮುಂತಾದ ಕಡೆ ಸೇವಂತಿ ಹೂವಿನ ಬೆಳೆ ಬೆಳೆದಿದ್ದಾರೆ. ಮುಂಗಾರು ಮಳೆ ಸರಿಯಾಗಿ ಆಗಿದ್ದರೆ ಸಾಕಷ್ಟು ಲಾಭ ಈ ಹೂವಿನ ಬೆಳೆಗಾರರು ಕಾಣುತ್ತಿದ್ದರು. ಆದರೂ ಹಾಕಿದ ಬಂಡವಾಳ ತೆಗೆಯುವಲ್ಲಿ ದಸರಾ ಆಸರೆಯಾಗಿದೆ ಎನ್ನಬಹುದು.
ಅರ್ಧಎಕರೆ ಸೇವಂತಿ ಹಾಕಿದ್ದೆ ಮಳೆ ಇಲ್ಲದಿದ್ದರಿಂದ ಬೋರ್ ನೀರು ಕಡಿಮೆಯಾಗಿ ಇಳುವರಿ ಬಹಶಃ ಕುಸಿಯಿತು, ಆದರೂ ದಸರಾ ಸ್ವಲ್ಪಮಟ್ಟಿಗೆ ಕೈ ಹಿಡಿದಿದೆ, ಪುನಃ ಈಗ ಮತ್ತೆ ಹಾಕಿದ್ದೇನೆ ಮುಂದೆ ನೋಡಬೇಕು ಎಂದು ಶೃಂಗಾರ ತೋಟದ ಸೇವಂತಿ ಬೆಳೆಗಾರ ನಾಗರಾಜ ತಿಳಿಸಿದ್ದಾರೆ.