ಕಂಪ್ಲಿ: ರೈತ ಕುಲದ ಸರ್ವಾಂಗೀಣ ಅಭಿವೃದ್ಧಿ, ಸಮೃದ್ಧ ಮಳೆ, ಉತ್ತಮ ಬೆಳೆ ಹಾಗೂ ರೈತರ ಸಂಕಷ್ಟಗಳಿಗೆ ಸರ್ಕಾರ ಮತ್ತು ಜನಪ್ರತಿನಿಧಿ ಸ್ಪಂದಿಸಿ ರೈತಪರ ನಿಲುವು ತಳೆಯಲಿ ಎಂಬ ಸಂಕಲ್ಪದೊಂದಿಗೆ ರೈತ ಸಂಘದ ತಾಲೂಕಾಧ್ಯಕ್ಷ ವಿ.ವೀರೇಶ್ ಸೋಮವಾರ ಎಮ್ಮಿಗನೂರು ಗ್ರಾಮದಲ್ಲಿ ದೀರ್ಘದಂಡ ನಮಸ್ಕಾರ ಹಾಕಿ ದೇವರ ಮೊರೆ ಹೋದರು.
ರೈತ ಸಂಘದ ತಾಲೂಕಾಧ್ಯಕ್ಷ ವಿ.ವೀರೇಶ್ ಮಾತನಾಡಿ, ರೈತರು ಒಂದೆಡೆ ಮಳೆ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಬೆಳೆಗಳಿಗೆ ತಗುಲುತ್ತಿರುವ ರೋಗ ಹಾಗೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯದಿರುವುದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಸಾಲ ಮಾಡಿ ಬೆಳೆ ಬೆಳೆದ ರೈತರು ನಿರೀಕ್ಷಿತ ಇಳುವರಿ ಮತ್ತು ಆದಾಯವಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಬೆಳೆ ಉಳಿಸಿ, ಕೃಷಿ ಚಟುವಟಿಕೆಗಳಿಗೆ ನೆರವಾಗಲು ಸಮೃದ್ಧ ಮಳೆಯಾಗುವುದು ಅತ್ಯವಶ್ಯಕವಾಗಿದೆ ಎಂದರು.
ಮಳೆ ಉತ್ತಮವಾಗಿ ಸುರಿದು ಜಲಮೂಲಗಳು ತುಂಬಿ, ರೈತರ ಜಮೀನುಗಳಲ್ಲಿ ಸಮೃದ್ಧ ಬೆಳೆ ಬರಬೇಕು. ರೈತರು ಅನುಭವಿಸುತ್ತಿರುವ ಸಂಕಷ್ಟ ದೂರವಾಗಿ ಕೃಷಿ ಕ್ಷೇತ್ರದಲ್ಲಿ ನೆಮ್ಮದಿ ನೆಲೆಸಬೇಕು. ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ತಕ್ಷಣ ಸ್ಪಂದಿಸಿ, ರೈತರ ಹಿತ ಕಾಪಾಡುವ ನಿಲುವು ತಳೆಯಬೇಕು ಎಂಬ ಆಶಯದಿಂದ ದೀರ್ಘದಂಡ ನಮಸ್ಕಾರ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.ಡಿ.10ರವರೆಗೆ ನೀರು ಹರಿಸಲು ಆಗ್ರಹ
ಈಗಾಗಲೇ ರೈತರು ವಿವಿಧ ಕಾರಣಗಳಿಂದ ಬೆಳೆ ನಷ್ಟ ಅನುಭವಿಸುತ್ತಿದ್ದು, ಉಳಿದಿರುವ ಬೆಳೆ ರಕ್ಷಿಸಿಕೊಳ್ಳಲು ನೀರಿನ ಅಗತ್ಯವಿದೆ. ನಿಗದಿತ ಅವಧಿಯವರೆಗೆ ನೀರು ಹರಿಸದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ತುಂಗಭದ್ರಾ ಜಲಾಶಯದಿಂದ ನೀರು ಹರಿಸುವುದರ ಜತೆಗೆ ಅಗತ್ಯವಿದ್ದಲ್ಲಿ ಭದ್ರಾ ಜಲಾಶಯ ಅಥವಾ ಕೃಷ್ಣಾ ನದಿಯಿಂದ ನೀರು ಪೂರೈಸುವ ಸಾಧ್ಯತೆ ಪರಿಶೀಲಿಸಬೇಕು. ಇಲ್ಲವೇ ಆಂಧ್ರಪ್ರದೇಶದ ರೈತರ ಮನವೊಲಿಸಿ ನೀರು ಹಂಚಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಬೇಕು. ರೈತರ ಅಹವಾಲು ಆಲಿಸಿ, ನೀರು ಪೂರೈಕೆ ಸೇರಿದಂತೆ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆ ನಿರ್ಲಕ್ಷಿಸದೆ ಕಾಲಮಿತಿಯೊಳಗೆ ಸ್ಪಂದಿಸಬೇಕು ಎಂದು ಹೇಳಿದರು.
ಎಲ್‌ಎಲ್ ಕಾಲುವೆಗೆ ಡಿ. 10ರವರೆಗೆ ನೀರು ಹರಿಸುವ ಕುರಿತು ಸರ್ಕಾರ ಹಾಗೂ ನೀರಾವರಿ ಅಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕು. ರೈತರ ಬೆಳೆ ಉಳಿಸುವಲ್ಲಿ ನಿರ್ಲಕ್ಷ್ಯ ತೋರಬಾರದು. ನಿಗದಿತ ಅವಧಿಯವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳದಿದ್ದರೆ ರೈತರನ್ನು ಸಂಘಟಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.