ಮುಂಗಾರು ಕೈಕೊಟ್ಟು, ಹಿಂಗಾರು ಬಿತ್ತನೆಗೂ ಮಳೆ ಕೊರತೆ
ಪರಶಿವಮೂರ್ತಿ ಮಾಟಲದಿನ್ನಿ
ಕನ್ನಡಪ್ರಭ ವಾರ್ತೆ ಕುಷ್ಟಗಿಹಿಂಗಾರು ಬಿತ್ತನೆಯ ಕಾಲ ಮುಗಿಯುತ್ತಾ ಬಂದರೂ ನಿರೀಕ್ಷಿತ ಮಳೆ ಬಾರದಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ. ಕೈಯಲ್ಲಿ ಹಣವಿಲ್ಲ, ಹೊಲದಲ್ಲಿ ಬೆಳೆ ನಿರೀಕ್ಷೆಯಿಲ್ಲ; ಇತ್ತ ಹಬ್ಬದ ಖರ್ಚು ನಿಭಾಯಿಸುವುದೇ ರೈತ ಕುಟುಂಬಗಳಿಗೆ ಸವಾಲಾಗಿದೆ.
ದರ ಏರಿಕೆ; ಜೇಬಿಗೆ ಕತ್ತರಿ
ಹಬ್ಬದ ಖರೀದಿಗೂ ಬೆಲೆ ಏರಿಕೆ ಬಿಸಿ:
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಹಬ್ಬದ ಸಿದ್ಧತೆಗಳು ನಡೆಯುತ್ತಿದ್ದರೂ, ಕೃಷಿಯನ್ನೇ ಅವಲಂಬಿಸಿರುವ ಅನೇಕ ಕುಟುಂಬಗಳಲ್ಲಿ ಈ ಬಾರಿ ನಿರೀಕ್ಷಿತ ಸಂಭ್ರಮ ಕಾಣುತ್ತಿಲ್ಲ. ಮಳೆಗಾಗಿ ಆಕಾಶದತ್ತ ಮುಖ ಮಾಡಿರುವ ರೈತರು, ಹೊಲದಲ್ಲಿ ಬೆಳೆ ಸಮೃದ್ಧಿಯಾಗಲಿ, ಮುಂದಿನ ದಿನಗಳಾದರೂ ಬದುಕು ಹಸನಾಗಲಿ ಎಂದು ಆಶಿಸುತ್ತಿದ್ದಾರೆ.
ಬಾಳೆಕಂಬ ಒಂದು ಜೋಡಿಗೆ ಗಾತ್ರದ ಆಧಾರದ ಮೇಲೆ 100-200, ಕಬ್ಬು 50, 1ಕೆಜಿ ಚೆಂಡು ಹೂವು 100-150, ಹಣ್ಣುಗಳ ಬೆಲೆ 1ಕೆಜಿಗೆ 150-300, ಕುಂಬಳಕಾಯಿ ಒಂದಕ್ಕೆ 100-150, ಸೇರಿದಂತೆ ಅನೇಕ ವಸ್ತುಗಳ ಬೆಲೆಯು ದುಬಾರಿಯಾಗಿತ್ತು.ಈ ವರ್ಷ ಎರಡು ದಿನ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಆಯುಧಪೂಜೆ ಮತ್ತು ವಿಜಯದಶಮಿ ಸಮಯದಲ್ಲಿ ಹೂವುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ ಕೆಲವರು ಕಡಿಮೆ ಪ್ರಮಾಣದಲ್ಲಿ ಹೂವು ಖರೀದಿಸುತ್ತಿದ್ದಾರೆ. ಹಬ್ಬದ ಸಂದರ್ಭದಲ್ಲಿ ವ್ಯಾಪಾರ ಚುರುಕಾಗಿದ್ದರೂ ಬೆಲೆ ಏರಿಕೆ ಹಾಗೂ ಗ್ರಾಹಕರ ಖರೀದಿ ಸಾಮರ್ಥ್ಯವೂ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತವೆ ಎನ್ನುತ್ತಾರೆ ಕುಷ್ಟಗಿ ಹೂವಿನ ವ್ಯಾಪಾರಿ ರಮೇಶ ಕನಕಗಿರಿ.ಕೃಷಿಯನ್ನೇ ನಂಬಿ ಬದುಕುವ ನಮಗೆ ಮಳೆ ಬಾರದಿದ್ದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಹಿಂಗಾರು ಬಿತ್ತನೆ ಮಾಡಬೇಕೆಂದರೆ ಮಳೆಯಿಲ್ಲ. ಬಿತ್ತನೆ ಬೀಜ, ಗೊಬ್ಬರ ಖರೀದಿಸಲು ಹಣ ಹೊಂದಿಸಬೇಕು. ಇತ್ತ ಹಬ್ಬವೂ ಬಂದಿದೆ. ಬೆಳೆ ಕೈಗೆ ಬರುವ ಮುನ್ನವೇ ಖರ್ಚು ಹೆಚ್ಚಾಗಿದ್ದು, ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದ್ದು ಸಾಂಕೇತಿಕವಾಗಿ ಹಬ್ಬ ಆಚರಣೆ ಮಾಡುವಂತಾಗಿದೆ ಎನ್ನುತ್ತಾರೆ ರೈತ ಸಂಗಪ್ಪ ಬಿಜಕಲ್.