ಶಂಕರ ಭಟ್ಟ ತಾರೀಮಕ್ಕಿ
೧೯೯೭- ೯೮ರಲ್ಲಿ ಮಂಜೂರಾಗಿದ್ದ ಈ ಯೋಜನೆಯನ್ನು ಅಂದಿನ ಪ್ರಧಾನಿ ವಾಜಪೇಯಿಯವರು ೨೦೦೦ರಲ್ಲಿ ಶಿಲಾನ್ಯಾಸ ನೆರವೇರಿಸಿ ಕಲಘಟಗಿವರೆಗೆ ಕಾಮಗಾರಿ ಪ್ರಾರಂಭಗೊಂಡಿತ್ತು. ಆದರೆ ಅನೇಕ ಪರಿಸರವಾದಿಗಳು ಮತ್ತು ಹಲವರು ಸೇರಿ ನ್ಯಾಯಾಲಯದಲ್ಲಿ ತಕರಾರು ಸಲ್ಲಿಸಿದ ಪರಿಣಾಮ ಇತ್ಯರ್ಥವಾಗದೇ ಕಳೆದ ೨೫ ವರ್ಷಗಳ ಕಾಲ ಆಗಾಗ ಚರ್ಚೆಯಾಗುತ್ತಲೇ ಇತ್ತು.
ಆದರೆ, ಯೋಜನೆ ಕಾರ್ಯರೂಪಕ್ಕೆ ಬರುವ ಯಾವ ಲಕ್ಷಣವೂ ಇಲ್ಲವಾಗಿತ್ತು. ಆದರೆ ಕೆಲವು ವರ್ಷಗಳ ಹಿಂದೆ ನ್ಯಾಯಾಲಯ ಅನುಮತಿ ನೀಡಿದ ಪರಿಣಾಮ ಪುನಃ ಯೋಜನೆಯ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಸಣ್ಣಪುಟ್ಟ ಕಾರಣಗಳಿಂದ ವಿಳಂಬವಾಗುತ್ತಲೇ ಸಾಗಿತ್ತು. ಈಗ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ನೀಡಿರುವುದರಿಂದ ಹೊಸ ಭರವಸೆ ಈ ಪ್ರದೇಶದ ಜನರಿಗೆ ಮೂಡಿದೆ.ಪ್ರಾರಂಭದಲ್ಲಿ ಈ ಯೋಜನೆಗೆ ₹೪೮೩ ಕೋಟಿ ವೆಚ್ಚ ತಗುಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಅದೀಗ ₹೧೬,೪೩೫ ಕೋಟಿಗೆ ತಲುಪಿದೆ. ಇದಕ್ಕಾಗಿ ೫೯೬ ಎಕರೆ ಖಾಸಗಿ ಜಮೀನು, ೪೭೦ ಎಕರೆ ಸರ್ಕಾರಿ ಜಮೀನು, ೧೪೬೬ ಎಕರೆ ಅರಣ್ಯ ಪ್ರದೇಶ ಈ ಯೋಜನೆಗೆ ಅಗತ್ಯವಾಗಿದ್ದು, ಈ ಜಮೀನನ್ನು ಭೂಸ್ವಾದೀನ ಪ್ರಕ್ರಿಯೆ ಮೂಲಕ ರೈಲ್ವೆ ಮಂಡಳಿ ಪಡೆಯಲಿದೆ. ಈ ಅಧಿಸೂಚನೆಯ ಕುರಿತು ನೈರುತ್ಯ ವಲಯ ರೈಲ್ವೆ ಮಂಡಳಿ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಮಾಹಿತಿ ನೀಡಿದ್ದಾರೆ.
ದಿನನಿತ್ಯ ಈ ಹೆದ್ದಾರಿಯಲ್ಲಿ ೧೦ರಿಂದ ೧೫ ಸಾವಿರ ವಾಹನ ಅದರಲ್ಲೂ ಸಿಲಿಂಡರ್, ಭಾರೀ ವಾಹನ ಸೇರಿದಂತೆ ನಿತ್ಯವೂ ಸಾವಿರಾರು ಭಾರೀ ವಾಹನಗಳು ಸಂಚರಿರುವುದರಿಂದ ಸದಾ ಈ ರಸ್ತೆ ಅಪಘಾತದ ಕೇಂದ್ರವಾಗಿ ಪರಿಣಮಿಸಿತ್ತು. ಪೊಲೀಸರಿಗೆ ಸದಾ ರಸ್ತೆ ತೆರವು ಮಾಡುವ ಪ್ರಕ್ರಿಯೆಯೇ ದೊಡ್ಡ ಸವಾಲಾಗಿತ್ತು. ಈ ರೈಲ್ವೆ ಯೋಜನೆಯಿಂದ ಭಾರೀ ವಾಹನಗಳು ಸಂಚರಿಸುವುದು ಕಡಿಮೆಯಾಗುತ್ತದೆಂಬ ವಿಶ್ವಾಸ ಯಲ್ಲಾಪುರದ ನಾಗರಿಕರಿಗೆ ಮೂಡಿದೆ.