ಹನುಮಸಾಗರ: ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪವಿತ್ರ ದಿನವಾಗಿದೆ ಎಂದು ಪ್ರವಚನಕಾರ ಏಕನಾಥ ಮೆದಿಕೇರಿ ಹೇಳಿದರು.
ನವದುರ್ಗೆಯರಲ್ಲಿ ಸಿದ್ಧಿದಾತ್ರಿ ದೇವಿಯು ಸಿದ್ಧಿ, ಜ್ಞಾನ, ಶಕ್ತಿ ಹಾಗೂ ಆಧ್ಯಾತ್ಮಿಕ ಉನ್ನತಿಯ ಸಂಕೇತವಾಗಿದ್ದಾಳೆ. ದೇವಿಯ ಆರಾಧನೆಯಿಂದ ಭಕ್ತರಲ್ಲಿ ಶ್ರದ್ಧೆ, ಭಕ್ತಿ, ಆತ್ಮವಿಶ್ವಾಸ ಹಾಗೂ ಸನ್ಮಾರ್ಗದಲ್ಲಿ ನಡೆಯುವ ಮನೋಭಾವ ಬೆಳೆಯುತ್ತದೆ. ನವರಾತ್ರಿ ಉತ್ಸವವು ಶಕ್ತಿಯ ಆರಾಧನೆಯೊಂದಿಗೆ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಹತ್ವವನ್ನು ಸಾರುತ್ತದೆ. ವಿಜಯದಶಮಿಯ ಅಂಗವಾಗಿ ಆಚರಿಸುವ ಆಯುಧ ಪೂಜೆಯು ನಮ್ಮ ಬದುಕಿಗೆ ಆಧಾರವಾಗಿರುವ ಉಪಕರಣಗಳು, ಕೆಲಸದ ಸಾಧನಗಳು ಹಾಗೂ ವೃತ್ತಿಗೆ ಸಂಬಂಧಿಸಿದ ಆಯುಧಗಳನ್ನು ಗೌರವಿಸುವ ಸಂಪ್ರದಾಯವಾಗಿದೆ. ಪ್ರತಿಯೊಬ್ಬರೂ ತಮ್ಮ ಕಾಯಕವನ್ನು ಶ್ರದ್ಧೆ, ಪ್ರಾಮಾಣಿಕತೆ ಮತ್ತು ಭಕ್ತಿಯಿಂದ ನಿರ್ವಹಿಸಬೇಕು. ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಐಕ್ಯತೆ, ಸಹಬಾಳ್ವೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು
ಈ ಸಂದರ್ಭದಲ್ಲಿ ಎಸ್ಎಸ್ಕೆ ಸಮಾಜದ ಅಧ್ಯಕ್ಷ ಭಗೀರಥಸಾ ಪಾಟೀಲ, ಉಪಾಧ್ಯಕ್ಷ ವಿಠಲಸಾ ಶಿಂಗ್ರಿ, ಮಾರುತಿಸಾ ರಂಗ್ರೇಜ, ಆನಂದ ಮೇಹರವಾಡೆ, ಮಹಿಳಾ ಮಂಡಳಿಯ ಸದಸ್ಯರು, ತರುಣ ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರು ಇತರರು ಇದ್ದರು.ಬನಶಂಕರಿ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಪ್ರವಚನಕಾರ ವಸಂತ ಸಿನ್ನೂರ ಮಾತನಾಡಿ, ನವರಾತ್ರಿ ಹಬ್ಬವು ದುಷ್ಟಶಕ್ತಿಗಳ ವಿರುದ್ಧ ದೈವಶಕ್ತಿಯ ವಿಜಯವನ್ನು ಸಾರುವ ಪವಿತ್ರ ಉತ್ಸವವಾಗಿದೆ. ದೇವಿಯ ಆರಾಧನೆಯು ಮಹಿಳಾ ಶಕ್ತಿಯ ಮಹತ್ವ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಒಳಿತನ್ನು ಪ್ರತಿಪಾದಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಮುತ್ತೈದೆಯರಿಗೆ ಗೌರವ ಸಲ್ಲಿಸುವುದು, ಧಾರ್ಮಿಕ ಸಂಪ್ರದಾಯಗಳನ್ನು ಮುಂದುವರಿಸುವುದು ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಹಬ್ಬಗಳನ್ನು ಆಚರಿಸುವುದು ಮಹತ್ವದ ಸ್ಥಾನ ಪಡೆದಿದೆ
ನವರಾತ್ರಿ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು.