ಮಾಜಿ ಸಚಿವ ಶಿವರಾಂ ಕ್ಷಮೆ ಕೋರಲು ಸಚಿವ ರಾಜಣ್ಣಗೆ ಮಲ್ಲಿಕಾರ್ಜನ್ ಒತ್ತಾಯ

KannadaprabhaNewsNetwork |  
Published : Feb 07, 2024, 01:47 AM IST
6ಎಚ್ಎಸ್ಎನ್5 : ಬೇಲೂರು ತಾಲ್ಲೂಕು ಕಾಂಗ್ರೆಸ್ ಯುವ ಮುಖಂಡರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಪತ್ರಿಕಾಗೋಷ್ಠಿ ನಡೆಸಿದರು.ಜಿಲ್ಲಾ ಉಸ್ತುವಾರಿ ಮಂತ್ರಿಯನ್ನು ಬದಲಾಯಿಸಲು ಒತ್ತಾಯ. | Kannada Prabha

ಸಾರಾಂಶ

ಮಾಜಿ ಸಚಿವ ಬಿ.ಶಿವರಾಂ ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಏಕ ವಚನದಲ್ಲಿ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು ಶೀಘ್ರವೇ ಅವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಕ್ಕೋಡು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ್ ಬೇಲೂರು ಮಾಧ್ಯಮಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಬಿಕ್ಕೋಡು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ಚರಿಕೆ । ಕ್ಷಮೆಗೆ ಪಟ್ಟುಕನ್ನಡಪ್ರಭ ವಾರ್ತೆ ಬೇಲೂರು

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಸಂಘಟನೆ ಮಾಡಿದ ಕೀರ್ತಿ ಬಿ. ಶಿವರಾಂ ಅವರಿಗೆ ಸಲ್ಲುತ್ತದೆ. ಇಂತಹ ವ್ಯಕ್ತಿಯ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಏಕ ವಚನದಲ್ಲಿ ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು ಶೀಘ್ರವೇ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಬೇಲೂರು ಬಗರ್‌ಹುಕುಂ ಸಮಿತಿ ಸದಸ್ಯ ಕನಾಯ್ಕನಹಳ್ಳಿ ಪ್ರದೀಪ್ ಮತ್ತು ಬಿಕ್ಕೋಡು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ್ ಎಚ್ಚರಿಕೆ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಚಿವ ಬಿ. ಶಿವರಾಂ ಸತತ ನಾಲ್ಕು ಬಾರಿ ಜಿಲ್ಲೆಯ ಗಂಡಸಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ೨೦೦೪ ರಲ್ಲಿಯೇ ಸಂಪುಟದ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಇಡೀ ಜಿಲ್ಲೆಯ ಸಂಪೂರ್ಣ ರಾಜಕೀಯವನ್ನು ಅರಿತು ಹತ್ತಾರು ಜನಪರ ಕೆಲಸಗಳಿಂದ ಜನಮನ್ನಣೆ ಪಡೆದಿದ್ದಾರೆ. ಆದರೆ ಜಿಲ್ಲಾ ಸಚಿವರು ಈ ರೀತಿಯ ಹೇಳಿಕೆ ನೀಡುವುದು ನಿಜಕ್ಕೂ ಕಾರ್ಯಕರ್ತರದಲ್ಲಿ ಬೇಸರದ ಜತೆಗೆ ಆಕ್ರೋಶವನ್ನು ಉಂಟು ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಬೇಕು. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಜಿಲ್ಲಾ ಸಚಿವರಾದ ಕೆ.ಎನ್. ರಾಜಣ್ಣ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಗಳಿಗೆ ಒತ್ತು ನೀಡುತ್ತಿಲ್ಲ, ಕಳೆದ ನಾಲ್ಕು ದಶಕದ ರಾಜಕೀಯ ಏಳು-ಬೀಳು ಹೋರಾಟ ನಡೆಸಿರುವ ಬಿ. ಶಿವರಾಂ ಬಗ್ಗೆ ಹಗುರದಿಂದ ಮಾತನಾಡಿದ್ದು ಅಕ್ಷಮ್ಯವಾಗಿದೆ ಎಂದು ಕಿಡಿಕಾರಿದರು.

ಅರೇಹಳ್ಳಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಂದೀಶ್ ಮತ್ತು ಕಾಂಗ್ರೆಸ್ ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಸುದರ್ಶನ್ ಮಾತನಾಡಿ, ಬಿ.ಶಿವರಾಂ ಗಂಡಸಿ ಕ್ಷೇತ್ರದಿಂದ ನಾಲ್ಕು ಬಾರಿ ಜಯಶೀಲರಾಗಿದ್ದರು. ಉದ್ದೇಶಪೂರ್ವಕವಾಗಿ ಕ್ಷೇತ್ರವನ್ನು ರದ್ದು ಪಡಿಸಿದ್ದಾರೆ. ಇಲ್ಲವಾದರೆ ಬಿ.ಶಿವರಾಂ ಹಿಂದೆಯೇ ಮುಖ್ಯಮಂತ್ರಿಯಾಗಬೇಕಿತ್ತು. ಆ ಅರ್ಹತೆ ಅವರಿಗೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಮೊದಲು ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ನೀಡದೆ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಶ್ವಾಶದ್ರೋಹ ಮಾಡಿದ ಕಾರಣದಿಂದ ಜಿಲ್ಲೆಗೆ ಅವರ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದರು.

ಯುವ ಕಾಂಗ್ರೆಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಸಚಿನ್ ಮತ್ತು ಕಾಂಗ್ರೆಸ್ ನಗರಾಧ್ಯಕ್ಷ ಸುಮುಖರಾಜು ಹಾಜರಿದ್ದರು.ಬೇಲೂರು ತಾಲೂಕು ಕಾಂಗ್ರೆಸ್ ಯುವ ಮುಖಂಡರು ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣರನ್ನು ಬದಲಾಯಿಸಲು ಒತ್ತಾಯಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ