ಬಳ್ಳಾರಿ: ಪ್ರವಾಸಕ್ಕೆಂದು ದುಬೈಗೆ ತೆರಳಿ ಸಿಲುಕಿಕೊಂಡಿದ್ದ ಬಳ್ಳಾರಿಯ ಪ್ರವಾಸಿಗರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.

ಬುಧವಾರ ರಾತ್ರಿ ದುಬೈನಿಂದ ವಿಶೇಷ ವಿಮಾನದ ಮೂಲಕ ಹೊರಟ ಬಳ್ಳಾರಿಯ 25 ಜನರು ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಆಗಮಿಸಿದರು. ದಾಕ್ಷಾಯಿಣಿ ಎಂಬುವರ ಆರೋಗ್ಯದಲ್ಲಿ ಏರುಪೇರಾಗಿದ್ದು ದುಬೈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಾಕ್ಷಾಯಿಣಿ ಪತಿ ಶರಣಪ್ಪ ಕೂಡ ಪತ್ನಿ ಜೊತೆ ದುಬೈನಲ್ಲಿಯೇ ಇದ್ದು ಇನ್ನೆರೆಡು ದಿನಗಳಲ್ಲಿ ವಾಪಸ್ ಆಗಲಿದ್ದಾರೆ ಎಂದು ಪ್ರವಾಸದಲ್ಲಿದ್ದ ಬಳ್ಳಾರಿಯ ಯಾಳ್ಪಿ ಮೇಟಿ ಪಂಪನಗೌಡ ಅವರ ಪುತ್ರ ದಿವಾಕರ್ ಕನ್ನಡಪ್ರಭಕ್ಕೆ ತಿಳಿಸಿದರು.

ದುಬೈಗೆ ತೆರಳಿದವರು ಬೆಂಗಳೂರಿಗೆ ಗುರುವಾರ ಬೆಳಿಗ್ಗೆ ಆಗಮಿಸುತ್ತಿದ್ದಾರೆ ಎಂದು ಖಚಿತವಾಗುತ್ತಿದ್ದಂತೆಯೇ ಬಳ್ಳಾರಿಯಿಂದ ತೆರಳಿದ್ದ ಕುಟುಂಬ ಸದಸ್ಯರು, ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ಬೆಂಬಲಿಗರು ಪ್ರವಾಸಿಗರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ದುಬೈ ಪ್ರವಾಸಿಗರು, ದುಬೈ ವೀಕ್ಷಣೆ ಮಾಡಲೆಂದು ಇದೇ ಮೊದಲ ಬಾರಿಗೆ ತೆರಳಿದ್ದೆವು. ಇರಾನ್ ಹಾಗೂ ಅಮೆರಿಕ ಯುದ್ಧದಿಂದಾಗಿ ನಾವು ತೀವ್ರ ಆತಂಕಕ್ಕೊಳಗಾಗಿದ್ದೆವು. ದುಬೈ ಅತ್ಯಂತ ಸುರಕ್ಷಿತ ಸ್ಥಳ ನಿಮಗೇನೂ ಆಗುವುದಿಲ್ಲ ಎಂದಿದ್ದರು. ನಾವು ನಿರಾಳದಲ್ಲಿದ್ದೆವು. ಆದರೆ, ಮಿಸೈಲ್‌ಗಳು ದುಬೈಗೆ ಬಂದು ಬೀಳುತ್ತಿದ್ದಂತೆಯೇ ನಮಗೆ ತೀವ್ರ ಆತಂಕವಾಯಿತು. ಯಾವಾಗ ಏನು ಆಗುತ್ತದೆಯೋ ಎಂಬ ಭೀತಿಯಲ್ಲಿದ್ದೆವು. ಆಗ ಗ್ರಾಮೀಣ ಶಾಸಕ ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಕರೆ ಮಾಡಿ ಧೈರ್ಯ ತುಂಬಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಲೇಬೇಕು. ಭಾರತೀಯರ ರಕ್ಷಣೆಗಾಗಿ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ನಾವಷ್ಟೇ ಅಲ್ಲ; ಭಾರತೀಯ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ತರುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ. ದುಬೈನ ರಾಯಭಾರ ಕಚೇರಿಯ ಅಧಿಕಾರಿಗಳು ಸಹ ನಮಗೆ ಸಹಾಯ ಮಾಡಿದರು. ದುಬೈ ಕನ್ನಡ ಸಂಘದವರು ಬರುವವರೆಗೆ ನಮ್ಮ ಕಾಳಜಿ ತೆಗೆದುಕೊಂಡಿದ್ದರು. ಪ್ರತಿ ಕ್ಷಣದಲ್ಲೂ ನಮಗೆ ಧೈರ್ಯ ತುಂಬುತ್ತಿದ್ದರು ಎಂದು ಕನ್ನಡಪ್ರಭಕ್ಕೆ ತಿಳಿಸಿದರು.

ದುಬೈಗೆ ತೆರಳಿದವರು ವಾಪಸ್ ಬರುತ್ತಿದ್ದಂತೆಯೇ ಕುಟುಂಬ ಸದಸ್ಯರು ಅತ್ಯಂತ ಸಂಭ್ರಮಗೊಂಡರು. ಫೆ.24 ರಂದು ಬಳ್ಳಾರಿಯಿಂದ 27 ಜನರು ಖಾಸಗಿ ಪ್ರವಾಸಿ ಏಜೆನ್ಸಿ ಮುಲಕ ದುಬೈ ವೀಕ್ಷಣೆಗೆ ತೆರಳಿದ್ದರು. ದುಬೈ ಪ್ರವಾಸಕ್ಕೆ ಪ್ರತ್ಯೇಕವಾಗಿ ಐವರು ಕುಟುಂಬ ಸದಸ್ಯರ ಜೊತೆ ತೆರಳಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಸಹ ದುಬೈನಲ್ಲಿ ಲಾಕ್ ಆಗಿದ್ದರು.


ನಮ್ಮ ತಂದೆ, ತಾಯಿ ಸೇರಿದಂತೆ ಒಟ್ಟು 15 ಜನರು ದುಬೈಗೆ ತೆರಳಿದ್ದರು. ಇಬ್ಬರು ಆರೋಗ್ಯ ಸಮಸ್ಯೆಯಿಂದ ಅಲ್ಲಿಯೇ ಉಳಿದಿದ್ದು ಉಳಿದವರು ಸುರಕ್ಷಿತವಾಗಿ ಬಂದಿದ್ದಾರೆ. ಗ್ರಾಮೀಣ ಶಾಸಕ ನಾಗೇಂದ್ರ ಕೊಚ್ಚಿಯಿಂದ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್‌ಗಳನ್ನು ಶಾಸಕರೇ ಬುಕ್ ಮಾಡಿದ್ದರು. ಅಪ್ಪ, ಅಮ್ಮ ಹಾಗೂ ಕುಟುಂಬ ಸದಸ್ಯರು ಸುರಕ್ಷಿತವಾಗಿ ಬಂದಿರುವುದು ಹೆಚ್ಚು ಸಂತಸ ತಂದಿದೆ. ಗುರುವಾರ ಸಂಜೆ ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದೆವು ಎನ್ನುತ್ತಾರೆ ದುಬೈಗೆ ಪ್ರವಾಸಕ್ಕೆ ತೆರಳಿದ್ದ ಮೇಟಿ ಪಂಪನಗೌಡ ಅವರ ಪುತ್ರ ಮೇಟಿ ದಿವಾಕರ.