ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

KannadaprabhaNewsNetwork | Published : Dec 25, 2024 12:46 AM

ಸಾರಾಂಶ

ಇದು ಸಂವಿಧಾನ ವಿರೋಧಿ ಆರ್.ಎಸ್.ಎಸ್.ನ ಮನಸ್ಥಿತಿಯಾಗಿದ್ದು, ಅಮಿತ್ ಶಾ ರವರ ಮಾತನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದೆ ಎಂದು ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್ ಅವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರು.

ಕನ್ನಡಪ್ರಭ ವಾರ್ತೆ ಮಾಗಡಿ

ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ಬೆಳಗ್ಗೆ 11.30 ಕ್ಕೆ ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರ ಕೂಗಿದರು. ಕಲ್ಯಾಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಡಾ.ರಾಜ್ ಕುಮಾರ್ ರಸ್ತೆ ಮೂಲಕ ಡೂಮ್ ಲೈಟ್ ವೃತ್ತದಿಂದ ಆರ್.ಆರ್.ರಸ್ತೆ ಮಾರ್ಗವಾಗಿ ಕೆಂಪೇಗೌಡ ವೃತ್ತ, ಕೋಟೆ ರಸ್ತೆಯಿಂದ ಪುರಸಭೆ ಮುಂಭಾಗದವರೆಗೂ ಸಾಗಿತು. ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಶಾಸಕ ಬಾಲಕೃಷ್ಣ ಮಾಲಾರ್ಪಣೆ ಮಾಡಿದರು.

ನಂತರ ಮಾಗಡಿ- ಬೆಂಗಳೂರು ಮುಖ್ಯರಸ್ತೆಯಲ್ಲಿ ಅಮಿತ್ ಶಾ ರವರ ಪ್ರತಿ ಕೃತಿಗೆ ಬೆಂಕಿ ಹಚ್ಚಿ ನೂರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಶಾಸಕ ಬಾಲಕೃಷ್ಣ ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ ದುರಹಂಕಾರಿ ವರ್ತನೆ ಮಾಡಿದ್ದಾರೆ. ಅಂಬೇಡ್ಕರ್ ವಿರುದ್ಧ ಈ ಹಿಂದಿನಿಂದಲೂ ಕೂಡ ಮಾಜಿ ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ಪ್ರತಾಪ್ ಸಿಂಹರವರು ಸಂವಿಧಾನ ವಿರೋಧಿ ಮಾತುಗಳನ್ನು ಆಡುತ್ತಾ ಬಂದಿದ್ದರು. ಈಗ ಕೇಂದ್ರ ಗೃಹ ಸಚಿವರು ಅಧಿವೇಶನದಲ್ಲೇ ಅಂಬೇಡ್ಕರ್ ಅವರ ವಿರುದ್ಧ ತಮ್ಮ ಮಾತುಗಳನ್ನಾಡುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ.

ಇದು ಸಂವಿಧಾನ ವಿರೋಧಿ ಆರ್.ಎಸ್.ಎಸ್.ನ ಮನಸ್ಥಿತಿಯಾಗಿದ್ದು, ಅಮಿತ್ ಶಾ ರವರ ಮಾತನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದೆ ಎಂದು ಆರೋಪ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಂಬೇಡ್ಕರ್ ಅವರ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸಿ, ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದರು. ನಂತರ ದೇಶದ ಭವಿಷ್ಯ ಬರೆಯಲು ಅಂಬೇಡ್ಕರ್ ಅವರನ್ನೇ ಕಾಂಗ್ರೆಸ್ ಪಕ್ಷ ಅಧ್ಯಕ್ಷರನ್ನಾಗಿ ನೇಮಕ ಮಾಡಿ ದೇಶಕ್ಕೆ ಸಂವಿಧಾನ ನೀಡಿರುವ ಕೆಲಸವನ್ನು ಮಾಡಿದನ್ನು ಆರ್.ಎಸ್.ಎಸ್ ನವರು ಮರೆಯಬಾರದು. ಓಟ್ಟಿನ ಆಸೆಗಾಗಿ ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದು ಗೃಹ ಸಚಿವರನ್ನು ಕೂಡಲೇ ಗಡಿಪಾರು ಮಾಡಿ ಸಚಿವ ಸ್ಥಾನದಿಂದ ವಜಾ ಮಾಡುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್. ಅಶೋಕ್ ಮಾತನಾಡಿದರು.ಬ್ಯಾಲಕೆರೆ ಚಿಕ್ಕರಾಜು, ಮಾಡಬಾಳ್ ಜಯರಾಂ, ಚಂದುರಾಯನಹಳ್ಳಿ ಕೃಷ್ಣ, ಕುದೂರು ಮಂಜೇಶ್ ಕೇಂದ್ರ ಸಚಿವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ವತಿಯಿಂದ ತಹಸೀಲ್ದಾರ್ ಶರತ್ ಕುಮಾರ್ ಅವರಿಗೆ ಕೇಂದ್ರ ಗೃಹ ಸಚಿವರ ವಿರುದ್ಧ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜೆ.ಪಿ.ಚಂದ್ರೇಗೌಡ, ಬಿ.ಎಸ್‌.ಕುಮಾರ್, ಗಣಕಲ್ ನಟರಾಜು,ಅರಳಕುಪ್ಪೆ ಕಾಂತರಾಜು, ಕಲ್ಕರೆ ಶಿವಣ್ಣ, ವನಜ, ಶೈಲಜ, ಶಿವಕುಮಾರ್, ಶಿವರಾಜು, ಬಿ.ಟಿ.ವೆಂಕಟೇಶ್, ನರಸಿಂಹಮೂರ್ತಿ, ಎಸ್.ಕೆ.ಲೋಕೇಶ್ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

Share this article