ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹಿಸಿ ಕಾಂಗ್ರೆಸ್ಸಿಗರ ಆಕ್ರೋಶ

KannadaprabhaNewsNetwork |  
Published : Oct 08, 2026, 01:15 AM IST
7ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಚುನಾವಣಾ ಆಯೋಗವನ್ನು ಕೊಂಡುಕೊಳ್ಳುವ ಕೆಲಸವನ್ನು ಬಿಜೆಪಿ ಮಾಡಿದೆ. ತಮ್ಮ ಹಿಟ್ಲರ್ ಸಂಸ್ಕೃತಿಯಿಂದಾಗಿ ಮುಖ್ಯ ಚುನಾವಣಾ ಆಯುಕ್ತರು ಶಿಕ್ಷೆಗೆ ಗುರಿಯಾಗದಂತೆ ಮಾಡಿದರು. ಅಹಿಂದ ಮತಗಳನ್ನು ಕಳ್ಳತನ ಮಾಡುವ ಮೂಲಕ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಿಸಿಕೊಳ್ಳಲು ಮೋದಿ ಮತ್ತು ಅಮಿತ್ ಶಾ ಷಡ್ಯಂತ್ರವಿದೆ. ಇದನ್ನು ‌ಖಂಡಿಸಿ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬರಿಗೂ ಮತದಾದನದ ಹಕ್ಕು ಕೊಡಿಸಿ, ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟ ನಡೆಸುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ಮತ ಕಳ್ಳತನ ಮತ್ತು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದನ್ನು ವಿರೋಧಿಸಿ ಪ್ರಜಾಪ್ರಭುತ್ವ ಉಳಿಸಿ ಮತ್ತು ಮತ ಬಚಾವೋ , ದೇಶ್ ಬಚಾವೋ ಆಂದೋಲನ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿಯಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಐಜೂರು ವೃತ್ತದ ಮೂಲಕ ಕೆಂಗಲ್ ಹನುಮಂತಯ್ಯ ವೃತ್ತಕ್ಕೆ ಆಗಮಿಸಿದರು. ಅಲ್ಲಿ ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.

ಜನರ ಹಕ್ಕು ಕಸಿಯುವ ಕೃತ್ಯ:

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಎನ್ ಆರ್ ವೆಂಕಟೇಶ್ , ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಪ್ರಜೆಗಳ ಮತದಾನದ ಹಕ್ಕಿನಲ್ಲಿದೆ. ಆ ಮತದ ಮೌಲ್ಯ ಮತ್ತು ಪಾವಿತ್ರ್ಯತೆಗೆ ಯಾವುದೇ ಧಕ್ಕೆಯಾಗದಂತೆ ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಅದನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಪಕ್ಷ ಸಹ ಹೋರಾಟಕ್ಕೆ ಇಳಿದಿದೆ ಎಂದರು.

ಮೂರು‌ ಮಂದಿ ಚುನಾವಣಾ ಆಯುಕ್ತರ ಪೈಕಿ ಜ್ಞಾನೇಶ್ ಕುಮಾರ್ ಅವರು ಮಾತ್ರ ಫಾರಂ 6 ತಿದ್ದುಪಡಿ ಮಾಡಿದರು. ತಿದ್ದುಪಡಿ ಮಾಡಿರುವ ವಿಷಯವಾಗಿ ನ್ಯಾಯಾಲಯ‌ ಸಹ ಸ್ಪಷ್ಟೀಕರಣ ಕೇಳಿದೆ. ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ವರ್ಗದವರಿಗೆ ‌ಮತದಾನದ ಹಕ್ಕು ಇರಬೇಕು. ಆದರೆ, ರಾಜಕೀಯ‌ ಲಾಭಕ್ಕಾಗಿ ಬಿಜೆಪಿ ತನಗೆ ಇಚ್ಛೆ ಬಂದಂತೆ ಮತಗಳ್ಳತನ ಮಾಡಿ ಜನರ ಹಕ್ಕು ಕಸಿಯುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೆಎಸ್ ಐಸಿ ಉಪಾಧ್ಯಕ್ಷ ಎಸ್.ಗಂಗಾಧರ್ ಮಾತನಾಡಿ, ಎಐಸಿಸಿಯ ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ವೋಟ್ ಚೋರಿ ನಡೆದಿದೆ ಎಂದು ಹೇಳಿದ್ದು ನಿಜವಾಗಿದೆ. ದೇಶದಲ್ಲಿ ಚುನಾವಣಾ ಆಯೋಗವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಹುನ್ನಾರದಿಂದ 13 ಕೋಟಿ‌ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗವನ್ನು ಕೊಂಡುಕೊಳ್ಳುವ ಕೆಲಸವನ್ನು ಬಿಜೆಪಿ ಮಾಡಿದೆ. ತಮ್ಮ ಹಿಟ್ಲರ್ ಸಂಸ್ಕೃತಿಯಿಂದಾಗಿ ಮುಖ್ಯ ಚುನಾವಣಾ ಆಯುಕ್ತರು ಶಿಕ್ಷೆಗೆ ಗುರಿಯಾಗದಂತೆ ಮಾಡಿದರು. ಅಹಿಂದ ಮತಗಳನ್ನು ಕಳ್ಳತನ ಮಾಡುವ ಮೂಲಕ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಿಸಿಕೊಳ್ಳಲು ಮೋದಿ ಮತ್ತು ಅಮಿತ್ ಶಾ ಷಡ್ಯಂತ್ರವಿದೆ. ಇದನ್ನು ‌ಖಂಡಿಸಿ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬರಿಗೂ ಮತದಾದನದ ಹಕ್ಕು ಕೊಡಿಸಿ, ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟ ನಡೆಸುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ‌ಅನುಷ್ಠಾನ‌ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು‌ ಮಾತನಾಡಿ, ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವ ವಿರೋಧಿ ಕೆಲಸ ಮಾಡುತ್ತಿದೆ. ಬಿಜೆಪಿ ಕಾರ್ಯಕರ್ತರು ಫಾರಂ 7 ಅನ್ನು ನೀಡುವ ಮೂಲಕ ಅಹಿಂದ ಮತಗಳನ್ನು ಗುರಿಯಾಗಿಸಿ ವಜಾ ಮಾಡಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಾಮ ಮಾರ್ಗ ಅನುಸರಿಸುತ್ತಿದೆ. ಕೇಂದ್ರ ಸಚಿವ ಕುಮಾರ ಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರು ದುರಾಡಳಿತವನ್ನು ಬೆಂಬಲಿಸುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತಿಭಟನೆಯ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಿ, ಭಾರತ ಸಂವಿಧಾನದ 326ನೇ ವಿಧಿಯನ್ನು ಸಾರ್ವಜನಿಕವಾಗಿ ಬೋಧಿಸಲಾಯಿತು.

ಪ್ರತಿಭಟನೆಯಲ್ಲಿ ಜಿಪಂ‌ ಮಾಜಿ ಅಧ್ಯಕ್ಷ ಕೆ.ರಮೇಶ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಚ್.ರಾಜು, ಸುನಿಲ್, ಪ್ರಮೋದ್, ಸುರೇಶ್, ಅಶೋಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈರೋಜ್ ಪಾಷ, ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು, ತಾಲೂಕು ಅಧ್ಯಕ್ಷ ದೇವರಾಜು, ಯುವ ಘಟಕದ ಅಧ್ಯಕ್ಷ ಭೂಷಣ್, ರಾಮು, ಮುಖಂಡರಾದ ನಾಗರಾಜು, ಗುರುಪ್ರಸಾದ್, ರವಿಕುಮಾರ್ , ಬಾಬು, ಗಂಗಾಧರ್ ಗೌಡ, ಶಿವಶಂಕರ್, ಈಶ್ವರ್, ಮುಕುಂದ, ಸುನಿಲ್, ಉಮೇಶ್, ನರಸಿಂಹಯ್ಯ, ಚಿಕ್ಕೇಗೌಡ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳುಪಿನಕಟ್ಟೆ ಬಳಿ ಹೈಕೋರ್ಟ್ ಪೀಠ ಸ್ಥಾಪಿಸಲು ಮನವಿ
ಕೂಡಲ ಸಂಗಮದಲ್ಲಿ ಗೋಮಾಂಸ ಭಕ್ಷಣೆ ವಿರುದ್ಧ ಸೂಕ್ತ ಕ್ರಮವಾಗಲಿ: ಮುತಾಲಿಕ್‌