ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯರೇ ಅಲ್ಲದ ವಿಧಾನಪರಿಷತ್ ಸದಸ್ಯರು ನಗರದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ, ಅಕ್ರಮ ದಾಖಲಾತಿ ಸೃಷ್ಟಿಸಿ, ಬಿಎಲ್‌ಒಗಳ ಮೂಲಕ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.
ಸೆಪ್ಟಂಬರ್ 12 ರಂದು ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯು ನಡೆಯಲಿದ್ದು, ಚುನಾವಣೆಗೆ 31 ನಗರಸಭಾ ಸದಸ್ಯರು, ಶಾಸಕರು ಹಾಗೂ ಸಂಸದರು ಸೇರಿ ಒಟ್ಟು 33 ಮಂದಿ ಮತ ಚಲಾಯಿಸುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಹತಾಶೆಗೊಂಡು ವಾಮಮಾರ್ಗದಿಂದ ನಗರಸಭೆಯ ಅಧಿಕಾರ ಹಿಡಿಯಲು ಅನುಸರಿಸುತ್ತಿರುವ ನೀತಿಗಳು ಪ್ರಜಾಪ್ರಭುತ್ವದ ವಿರುದ್ಧವಾಗಿವೆ ಎಂದು ದೂರಿದರು.ವಿಪ ಸದಸ್ಯರಾದ ಅನಿಲ್‌ಕುಮಾರ್, ಎಂ.ಆರ್.ಸೀತಾರಾಮ್ ಅವರನ್ನು ನಗರ ನಿವಾಸಿಗಳು ಎಂದು ನಮೂದಿಸಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಸೇರಿಸಿದ್ದು, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಸೇರಿದಂತೆ ಹಲವು ವಿಧಾನಪರಿಷತ್ ಸದಸ್ಯರನ್ನು ಪಟ್ಟಿಯಲ್ಲಿ ಸೇರಿಸಲು ಹುನ್ನಾರ ನಡೆಯುತ್ತಿದೆ. ಈ ಅಕ್ರಮದಲ್ಲಿ ಭಾಗಿಯಾಗುತ್ತಿರುವ ಬಿಎಲ್‌ಒ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ನುಡಿದರು.
ನಗರಸಭೆ ಮಾಜಿ ಅಧ್ಯಕ್ಷ ಆನಂದ್‌ರೆಡ್ಡಿ ಬಾಬು ಮಾತನಾಡಿ, ಮತದಾರನಾಗಿ ಮತದಾರರ ಪಟ್ಟಿಗಾಗಿ ಈಗಾಗಲೇ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಅವರು ನೀಡುವ ಮತದಾರರ ಪಟ್ಟಿಯಲ್ಲಿ ಸತ್ಯಾಸತ್ಯತೆ ಬಹಿರಂಗಗೊಳ್ಳಲಿದೆ. ಇದರಲ್ಲಿ ಏನಾದರೂ ವಾಮಮಾರ್ಗದಲ್ಲಿ ಹೆಸರುಗಳನ್ನು ಸೇರಿಸಿದ್ದರೆ ಕಾನೂನು ಹೋರಾಟ ನಡೆಸಲು ಮುಂದಾಗುವುದಾಗಿ ಹೇಳಿದರು.
ಚುನಾವಣಾಧಿಕಾರಿಗೆ ಮನವಿ:
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಪಡೆದಿರುವ ಮತದಾರರ ಪಟ್ಟಿಯನ್ನು ಅತಿ ತುರ್ತಾಗಿ ನೀಡಬೇಕು. 31 ಜನ ನಗರಸಭೆ ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರನ್ನು ಬಿಟ್ಟು ಉಳಿದ ವಿಧಾನಪರಿಷತ್ತು ಸದಸ್ಯರನ್ನು ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಫಾರಂ ನಂಬರ್ -8 ರ ಪ್ರಕಾರ ಎಲ್ಲಿಂದ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯ ಯಾವ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದೆ ಎಂಬುದರ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ದೃಢೀಕರಣ ಪತ್ರ ನೀಡಬೇಕೆಂದು ಚುನಾವಣಾಧಿಕಾರಿಗೆ ನೀಡಿರುವ ಪತ್ರದಲ್ಲಿ ಕೋರಿದ್ದಾರೆ.