- ಸಿಎಂ ಕುರ್ಚಿಗಾಗಿ ಶಾಸಕರ ಕುದುರೆ ವ್ಯಾಪಾರ ಶುರುವಾಗತ್ತೆ ಎಂದ ಬಿಜೆಪಿ ಮುಖಂಡ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಗದ್ದಲ ಜೋರಾಗುತ್ತಿದ್ದು, ಇನ್ನು ಮುಂದೆ ಕುದುರೆ ಫೈಟ್ ಸಹ ಶುರುವಾಗುತ್ತದೆ, ಬರೆದಿಟ್ಟುಕೊಳ್ಳಿ. ಶಾಸಕರಿಗೆ ₹50 ಕೋಟಿವರೆಗೆ ಆಫರ್ ನೀಡುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಬೇಕು ಅಂತಾ, ನನಗೆ ಮುಖ್ಯಮಂತ್ರಿ ಮಾಡಬೇಕೆಂಬುದಾಗಿ ಕಾಂಗ್ರೆಸ್ಸಿಗರಲ್ಲೇ ಕಚ್ಚಾಟ ಶುರುವಾಗುತ್ತದೆ. ಮುಖ್ಯಮಂತ್ರಿ ಕುರ್ಚಿ ಒಳಜಗಳದಿಂದಾಗಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ನಾನೂ ಮುಖ್ಯಮಂತ್ರಿ ರೇಸ್‌ನಲ್ಲಿ ಇದ್ದೇನೆಂಬುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ. ನಾನೂ ಸಿಎಂ ಆಗಬೇಕು ಎನ್ನುವವರೇ ಕಾಂಗ್ರೆಸ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.ಯತ್ನಾಳ ವಿರುದ್ಧ ವಾಗ್ದಾಳಿ:
ಹಾದೀಲಿ, ಬೀದಿಲಿ ಹೋಗುವವರ ಬಗ್ಗೆ ಉತ್ತರ ನೀಡಲು ನಾನು ಸಿದ್ಧನಿಲ್ಲ. ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರು. ಪಕ್ಷದಿಂದ ಉಚ್ಚಾಟಿತರಾದವರಿಗೆ ಬಿಜೆಪಿ ಬಗ್ಗೆಯಾಗಲೀ, ವಿಜಯೇಂದ್ರ ಬಗ್ಗೆಯಾಗಲೀ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ವಿಜಯಪುರದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ತಿರುಗೇಟು ನೀಡಿದರು.ಯತ್ನಾಳ್ ಪಕ್ಷ ಕಟ್ಟುತ್ತಾರೋ, ಜೆಸಿಬಿ ಚಿಹ್ನೆ ತರುತ್ತಾರೋ ಇದು ಅಂತಹವರ ವೈಯಕ್ತಿಕ ವಿಚಾರ. ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಲಿ ಸಂತೋಷ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಕಾಂಗ್ರೆಸ್ ಮುಕ್ತವಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು.
ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ. ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವ ಅಷ್ಟೇ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ, ರಾಜಶೇಖರ ನಾಗಪ್ಪ ಜಿಲ್ಲಾಧ್ಯಕ್ಷರಾಗಿ ಮುಂದುವರಿಯುವುದೂ ಅಷ್ಟೇ ಸತ್ಯ. ಉಳಿದಂತೆ ಯಾರು ಬದಲಾವಣೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೋ ಅಂತಹವರನ್ನೇ ಕೇಳಿ ಎಂದು ರೇಣುಕಾಚಾರ್ಯ ಬಿಜೆಪಿ ರೆಬೆಲ್ ನಾಯಕರಿಗೆ ಟಾಂಗ್ ನೀಡಿದರು.- - -
(ಸಾಂದರ್ಭಿಕ ಚಿತ್ರ)