ಕಾಂಗ್ರೆಸ್‌ನ ನಕಾರಾತ್ಮಕ ರಾಜಕಾರಣ ದೇಶವಿರೋಧಿಯಾಗಿದೆ: ಬಿ.ವೈ.ರಾಘವೇಂದ್ರ

KannadaprabhaNewsNetwork |  
Published : Mar 15, 2026, 01:30 AM IST
ಪೊಟೊ: 14ಎಸ್ಎಂಜಿಕೆಪಿ06 | Kannada Prabha

ಸಾರಾಂಶ

ಇರಾನ್ ಮತ್ತು ಅಮೇರಿಕಾ, ಇಸ್ರೇಲ್ ಸಂಘರ್ಷ ಮತ್ತು ಹೋರ್ಮುಜ್ ಜಲಸಂಧಿಯ ಅಡಚಣೆಯಿಂದಾಗಿ ಇಡೀ ಜಗತ್ತು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಭಾರತದಲ್ಲಿ ಕಾಂಗ್ರೆಸ್ ಪಕ್ಷವು ಈ ಗಂಭೀರ ಪರಿಸ್ಥಿತಿಯಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಸಂಸದ ಬಿ.ವೈ.ರಾಘವೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇರಾನ್ ಮತ್ತು ಅಮೇರಿಕಾ, ಇಸ್ರೇಲ್ ಸಂಘರ್ಷ ಮತ್ತು ಹೋರ್ಮುಜ್ ಜಲಸಂಧಿಯ ಅಡಚಣೆಯಿಂದಾಗಿ ಇಡೀ ಜಗತ್ತು ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಭಾರತದಲ್ಲಿ ಕಾಂಗ್ರೆಸ್ ಪಕ್ಷವು ಈ ಗಂಭೀರ ಪರಿಸ್ಥಿತಿಯಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಸಂಸದ ಬಿ.ವೈ.ರಾಘವೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 120 ಡಾಲರ್ ದಾಟಿದ್ದರೂ, ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಸಬ್ಸಿಡಿ ಮತ್ತು ತೆರಿಗೆ ಹೊಂದಾಣಿಕೆಯ ಮೂಲಕ ಸಾಮಾನ್ಯ ಜನರ ಮೇಲೆ ಹೊರೆ ಬೀಳದಂತೆ ನೋಡಿಕೊಳ್ಳುತ್ತಿದೆ. ಹಾಗಿದ್ದರೂ, ಜನರನ್ನು ಅನಗತ್ಯವಾಗಿ ಆತಂಕಗೊಳಿಸುವಂತೆ ಪ್ರತಿಭಟನೆಗಳನ್ನು ನಡೆಸಿ, ಅನಗತ್ಯ ಹೇಳಿಕೆ ನೀಡಿ, ದೇಶದ ಬಿಕ್ಕಟ್ಟಿನ ಸಂದರ್ಭದಲ್ಲೂ ಕೀಳು ರಾಜಕೀಯ ನಡೆಸುತ್ತಿದೆ ಎಂದು ತೀವ್ರವಾಗಿ ಹರಿಹಾಯ್ದಿದ್ದಾರೆ.

ನೆರೆಯ ರಾಷ್ಟ್ರಗಳಲ್ಲಿ ಇಂಧನ ಬೆಲೆ ಶೇ. 20ಕ್ಕಿಂತಲೂ ಅಧಿಕ ಏರಿಕೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದರೆ, ಭಾರತದಲ್ಲಿ ಬೆಲೆಗಳು ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗಿದೆ. ಇಂತಹ ಸೂಕ್ಷ್ಮ, ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ, ದೇಶದ ಏಕತೆ ಕಾಯ್ದುಕೊಂಡು, ಕೇಂದ್ರ ಸರ್ಕಾರಕ್ಕೆ ಸಾಥ್ ನೀಡುವ ಬದಲು, ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಜನರಲ್ಲಿ ಆತಂಕ ಸೃಷ್ಟಿಸುತ್ತಿರುವ ಕಾಂಗ್ರೆಸ್‌ನ ನಕಾರಾತ್ಮಕ ರಾಜಕಾರಣ ದೇಶವಿರೋಧಿಯಾಗಿದೆ ಎಂದು ಸಂಸದ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತವು ಇಂದು ಕೇವಲ ಒಂದು ಮಾರ್ಗವನ್ನು ಅವಲಂಬಿಸದೆ, ರಷ್ಯಾ, ಕೆನಡಾ ಮತ್ತು ಅಮೆರಿಕದಂತಹ ಪರ್ಯಾಯ ಮೂಲಗಳಿಂದ ಇಂಧನ ಆಮದು ಮಾಡಿಕೊಳ್ಳುತ್ತಿದೆ. ಹೋರ್ಮುಜ್ ಜಲಸಂಧಿಯ ಮೂಲಕ ಬರುತ್ತಿದ್ದ ಶೇ. 40-50ರಷ್ಟು ಪೂರೈಕೆಗೆ ಧಕ್ಕೆಯಾಗದಂತೆ ಈಗಾಗಲೇ ಶೇ. 70 ರಷ್ಟು ಕಚ್ಚಾ ತೈಲವನ್ನು ಪರ್ಯಾಯ ಮಾರ್ಗಗಳ ಮೂಲಕ ಸುರಕ್ಷಿತಗೊಳಿಸಲಾಗಿದೆ. ದೇಶದ 33 ಕೋಟಿ ಕುಟುಂಬಗಳ ಅಡುಗೆ ಮನೆಗೆ ಮೊದಲ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಅಗತ್ಯ ವಸ್ತುಗಳ ಕಾಯ್ದೆ (ECA) ಅಡಿಯಲ್ಲಿ ಗೃಹಬಳಕೆಯ LPG ಪೂರೈಕೆಯನ್ನು ಶೇ.100 ಖಚಿತಪಡಿಸಿದೆ ಎಂದು ಹೇಳಿದ್ದಾರೆ.

ಪೆಟ್ರೋಲಿಯಂ ಸಚಿವರು ಮತ್ತು ಕೇಂದ್ರ ನಾಯಕತ್ವವು ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ದೇಶದಲ್ಲಿ ಇಂಧನ ಮತ್ತು ಅನಿಲದ ಸಾಕಷ್ಟು ದಾಸ್ತಾನು ಇರುವಂತೆ ನೋಡಿಕೊಳ್ಳಲಾಗಿದೆ. ಬಿತ್ತನೆ ಹಂಗಾಮು ಹತ್ತಿರವಿರುವ ಈ ಸಮಯದಲ್ಲಿ ರೈತರಿಗೆ ಬೇಕಾದ ಗೊಬ್ಬರ ಕಾರ್ಖಾನೆಗಳಿಗೆ ಶೇ. 70ರಷ್ಟು ಗ್ಯಾಸ್‌ ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ. ಹೋಟೆಲ್ ಮತ್ತು ವಾಣಿಜ್ಯ ವಲಯಕ್ಕೆ ಶೇ.20 ಮೀಸಲು ಬಿಡುಗಡೆ ಮಾಡುವ ಜೊತೆಗೆ ಪರ್ಯಾಯ ಇಂಧನ ಬಳಕೆಗೆ ಅವಕಾಶ ನೀಡಿ ವ್ಯವಸ್ಥಿತ ಹಂಚಿಕೆ ಮಾಡಲಾಗುತ್ತಿದೆ. ಡಿಜಿಟಲ್ ಅಥೆಂಟಿಕೇಶನ್ (DAC) ಮೂಲಕ ಕಾಳಸಂತೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್ ಬಿಕ್ಕಟ್ಟನ್ನು ಮೆಟ್ಟಿ ನಿಂತಂತೆ, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತವು ಈ ಇಂಧನ ಸವಾಲನ್ನೂ ಯಶಸ್ವಿಯಾಗಿ ಗೆಲ್ಲಲಿದೆ. ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬೇಡಿ, ವದಂತಿಗಳಿಗೆ ಕಿವಿಗೊಡಬಾರದು ಮತ್ತು ಭಯಭೀತರಾಗಿ ಮುಂಗಡ ಬುಕ್ಕಿಂಗ್ ಮಾಡುವ ಅಗತ್ಯವಿಲ್ಲ, ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರಂತವಾಗಿ ಅವಲೋಕಿಸುತ್ತಿದೆ, ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಹುಲ್‌ ಗಾಂಧಿ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಜನಪರ ಯೋಜನೆಗಳಲ್ಲಿ ಎಸ್‌. ಬಂಗಾರಪ್ಪ ಜೀವಂತ: ಸಚಿವ ಮಧು ಬಂಗಾರಪ್ಪ