ಕನ್ನಡಪ್ರಭ ವಾರ್ತೆ ವಿಜಯಪುರ
ಕಾಂಗ್ರೆಸ್ ಮುಖ್ಯಮಂತ್ರಿ ಮಾದಿಗರನ್ನು ಎಂದಿಗೂ ಅಪ್ಪಿಕೊಂಡು ಮಾತನಾಡಿಲ್ಲ . ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಾದಿಗರಿಗೆ ಮೀಸಲಾತಿ ಕೊಡಿಸುವ ಹಾಗೂ ಸಮಾಜಿಕ ನ್ಯಾಯ ಕೊಡಿಸುವ ಹೋರಾಟದಲ್ಲಿ ನಾನು ನಿಮ್ಮ ಜೊತೆಗಿದ್ದೇನೆ ಎಂದು ನಮ್ಮನ್ನು ಅಪ್ಪಿಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಟೀಕಿಸಿದರು.ನಗರದ ಸಾಯಿ ಗಾರ್ಡನ್‌ನಲ್ಲಿ ಭಾನುವಾರ ನಡೆದ ರಾಜ್ಯದ ಎಲ್ಲಡೆ ಮಾದಿಗ ಮುನ್ನೆಡೆ ಸಮಾವೇಶದಲ್ಲಿ ಮಾತನಾಡಿದ ಅವರು, ಮಾದಿಗರ 30 ವರ್ಷದ ಹೋರಾಟಕ್ಕೆ ಜಯ ಸನಿಹದಲ್ಲಿ ಬಂದಿದೆ. ಕೇವಲ ಮಾದಿಗರಷ್ಟೇ ಅಲ್ಲ. 101 ಜನಾಂಗದವರಿಗೂ ಸಮಾಜಿಕ ನ್ಯಾಯ ಒದಗಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸಿದ್ಧರಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮಿಸಲಾತಿಯಿಂದ ಭಜಂತ್ರಿ, ವಡ್ಡರ, ಲಂಬಾಣಿಗಳನ್ನು ತೆಗೆದು ಹಾಕುತ್ತಾರೆ ಎಂದು ಬಿಜೆಪಿ ವಿರುದ್ಧ ಸುಳ್ಳು ಅಪಪ್ರಚಾರ ಮಾಡಿದರು. ಅದರಲ್ಲೂ ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದರು. ನಾನು ಹೋದ ಕಡೆಗಳಲ್ಲಿ, ಸುದ್ದಿಗೋಷ್ಠಿಯಲ್ಲಿ ದಾಂಧಲೆ ಮಾಡಿಸಿದರು ಎಂದರು.
ಕಾಂಗ್ರೆಸ್‌ನಿಂದ ಇನ್ನೂ 100 ವರ್ಷ ಕಳೆದರೂ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ನಮಗೆ ಸಾಮಾಜಿಕ ನ್ಯಾಯ ದೊರೆಯುವುದು ನರೇಂದ್ರ ಮೋದಿ ಅವರಿಂದ ಮಾತ್ರ. ಹಾಗಾಗಿ ನೀವೆಲ್ಲ ಮೋದಿ ಅವರನ್ನೇ ಬೆಂಬಲಿಸಿ ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡಿ ಎಂದು ಹೇಳಿದರು.ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೆಲಸ ಮಾಡುತ್ತದೆ. ನಮ್ಮಲ್ಲಿ ಮರೆವು ಜಾಸ್ತಿ ಹಾಗಾಗಿಯೇ ನಾವು ಇಷ್ಟು ಹಿಂದೆ ಉಳಿದಿದ್ದೇವೆ. ನಾವು ಸುಮ್ಮನೆ ಕೂಡಬಾರದು. ಕಾಂಗ್ರೆಸ್ ಮಾಡಿದ ಮೋಸವನ್ನು ಜನರ ಮುಂದೆ ಹೇಳಬೇಕು. ಬಿಜೆಪಿ ಯಾವ ಜನಾಂಗಕ್ಕೂ ಅನ್ಯಾಯ ಮಾಡುವುದಿಲ್ಲ ಎನ್ನುವುದನ್ನು ನಾವು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಈ ಮಾದಿಗ ಸಮಾವೇಶ ಬಿಜೆಪಿ ಪಕ್ಷದ ಕಾರ್ಯಕ್ರಮವಲ್ಲ. ಇದು ಮಾದಿಗ ಸಮುದಾಯ ಜಾಗೃತಿ ಸಮಾವೇಶವಾಗಿದೆ. ನಾವು ಪ್ರತಿ ಜಿಲ್ಲೆಯಲ್ಲಿ ಮಾದಿಗ ಸಮಾವೇಶ ಮಾಡಿ ನಮ್ಮ ಜನಾಂಗವನ್ನು ಎಚ್ಚರಗೊಳಿಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ದುರ್ಯೋಧನ ಐಹೊಳೆ, ಮಾದಿಗ ದಂಡೋರ ಅಧ್ಯಕ್ಷ ಟಿ.ನರಸಪ್ಪ, ವಿಠ್ಠಲ ನಡುವಿನಕೇರಿ, ಶರಣು ಬ್ಯಾಳಿ, ಬಾಗಪ್ಪ ಗೂಗಿಹಾಳ, ಬಿಜೆಪಿ ಮುಖಂಡ ಉಮೇಶ ಕಾರಜೋಳ, ಹಣಮಂತ ಬಿರಾದಾರ ಉಪಸ್ಥಿತರಿದ್ದರು.