ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟನೆ
ಲಕ್ಞ್ಮೇಶ್ವರ: ನಮ್ಮ ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಂಡು ಯಾವುದೇ ಕ್ರಿಮಿನಾಶಕ ಬಳಸದೆ ಹಾಗೂ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ಮಾಡುವತ್ತ ಗಮನಹರಿಸುವುದು ಅಗತ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಶನಿವಾರ ಸಮೀಪದ ಶ್ಯಾಬಳ ರಸ್ತೆಯಲ್ಲಿನ ಬಸವರಾಜ ಶಿರಹಟ್ಟಿ ಅವರ ತೋಟದಲ್ಲಿ ತೋಟಗಾರಿಕೆ ಇಲಾಖೆ, ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಭಾಗದ ರೈತರು ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಂಡು ಹೆಚ್ಚು ಬೆಳೆ ತೆಗೆಯುವ ಮೂಲಕ ಆರ್ಥಿಕವಾಗಿ ಬೆಳೆಯಬೇಕು, ನಮ್ಮ ಗ್ರಾಮೀಣ ರೈತರು ಸಾಲದಲ್ಲಿಯೇ ಹುಟ್ಟಿ ಸಾಲದಲ್ಲಿಯೇ ಸಾಯುತ್ತಿದ್ದಾರೆ. ಅದಕ್ಕಾಗಿ ರೈತರು ಕೇವಲ ಕೃಷಿಯೊಂದನ್ನೇ ಅವಲಂಬಿಸದೆ ಕೃಷಿ ಜೊತೆಯಲ್ಲಿ ಉಪಕಸಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಬೇಕು. ರೈತರು ಆಧುನಿಕ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಉತ್ಪಾದನೆ ಮಾತ್ತು ಆರ್ಥಿಕವಾಗಿ ಬೆಳೆಯಬೇಕು, ರೈತರು ದೇಶಕ್ಕೆ ಅನ್ನ ನೀಡುವ ಶಕ್ತಿ ಹೊಂದಿದ್ದು ಬೇರೆಯವರ ಮುಂದೆ ಕೈಚಾಚಿ ನಿಲ್ಲಬಾರದು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಸಹಾಯಕ ನಿರ್ಧೇಶಕ ಸುರೇಶ ಕುಂಬಾರ ಮಾತನಾಡಿ, ತೋಟಗಾರಿಕೆ ಇಲಾಖೆಯು ನಮ್ಮ ಭಾಗದ ರೈತರಿಗೆ ಹೊಂದಾಣಿಕೆಯಾಗುವ ತೋಟಗಾರಿಕೆ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಬೇಕಲು ಎನ್ನುವುದು ನಮ್ಮ ಇಲಾಖೆಯ ಉದ್ದೇಶವಾಗಿದೆ ಎಂದು ಹೇಳಿದರು. ಈ ವೇಳೆ ಬಸವರಾಜ ಶಿರಹಟ್ಟಿ, ಬಸವರಾಜ ಬೆಂಡಿಗೇರಿ. ಬಸವರಾಜ ಬೆಂಗಳೂರ, ಅಮರಪ್ಪ ಗುಡಗುಂಟಿ, ಗಂಗಾಧರ ಶಿರಗಣ್ಣವರ, ಪುಟ್ಟಪ್ಪ ಸೊರಟೂರ ಸೇರಿದಂತೆ ಅನೇಕರು ಇದ್ದರು.