ಕನ್ನಡಪ್ರಭ ವಾರ್ತೆ ಮೈಸೂರುಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷದಲ್ಲಿ 143 ವಸ್ತುಗಳ ಬೆಲೆ ಏರಿಸಿದೆ. ಈಗ ಬಿಜೆಪಿಯವರೇ ನಡೆಸುತ್ತಿರುವ ಜನಾಕ್ರೋಶ ಯಾತ್ರೆಯು ನಾಟಕದ್ದು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು. ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ 70, ಡಿಸೇಲ್ 50 ರೂ.ಗೆ ಸಿಗುತ್ತಿತ್ತು. ಗ್ಯಾಸ್ ಬೆಲೆ 450 ರೂ. ಇತ್ತು. ಇವತ್ತು ತೈಲ ಬೆಲೆ ಕಡಿಮೆಯಿದ್ದರೂ ಲೀಟರ್ ಪೆಟ್ರೋಲ್ 103, ಡಿಸೇಲ್ 92 ರೂ. ತಲುಪಿದೆ ಎಂದರು. ಅಗತ್ಯ ವಸ್ತುಗಳ ಬೆಲೆ ಶೇ. 400ರಷ್ಟು ಹೆಚ್ಚಾಗಿದೆ. ತೈಲ ಬೆಲೆ ಏರಿಕೆಯಿಂದ ಕೇಂದ್ರದ ಎನ್.ಡಿ.ಎ ಸರ್ಕಾರ 11 ವರ್ಷದಲ್ಲಿ 43 ಲಕ್ಷ ಕೋಟಿ ಹಣವನ್ನು ಲೂಟಿ ಮಾಡಿದೆ. ರಾಜ್ಯದಲ್ಲಿ ಜನಾಕ್ರೋಶ ಯಾತ್ರೆ ಆರಂಭವಾದ ದಿನವೇ 50 ರೂ. ಗ್ಯಾಸ್ ದರ ಏರಿಕೆಯಾಗಿದೆ. ಟೋಲ್ ದರ ಏರಿಸಲಾಗಿದೆ. ಬಿಜೆಪಿಯವರು ರೈತ ವಿರೋಧಿಗಳಾದ ಕಾರಣಕ್ಕೆ ಹಾಲಿನ ದರ ಏರಿಕೆಯನ್ನು ವಿರೋಧಿಸುತ್ತಿದ್ದಾರೆ. 10 ವರ್ಷಗಳ ಹಿಂದೆ ಚಿನ್ನ, ಬೆಳ್ಳಿ, ಕಬ್ಬಿಣ, ಇನ್ನೋವ ಕಾರು, ಅಡುಗೆ ಎಣ್ಣೆ ಎಷ್ಟಿತ್ತು. ಈಗ ಎಷ್ಟಾಗಿದೆ. ಲೆಕ್ಕ ಹಾಕುವಂತೆ ಒತ್ತಾಯಿಸಿದರು. ಹೆಣ ಸುಡುವುದಕ್ಕೂ ಜಿಎಸ್‌ಟಿ ಹಾಕಿದ ಕೀರ್ತಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಲ್ಲಬೇಕು ಎಂದು ಅವರು ಟೀಕಿಸಿದರು.ವಕ್ಫ್ ಬಿಲ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ. ಜನರು ಬೀದಿಗಿಳಿದು ಹೋರಾಟ ಮಾಡಬೇಕು. ಈ ಮಸೂದೆಯನ್ನು ಯಾರು ಕೇಳಿದ್ದರು? ಇದರ ಹಿಂದಿನ ಮರ್ಮ ಏನು ಎಂದು ಪ್ರಶ್ನಿಸಿದರು. ದೇಶದಲ್ಲಿ ನಾಲ್ಕು ವಕ್ಫ್ ಬೋರ್ಡ್ ನ ಅಡಿ 8.62 ಲಕ್ಷ ವಕ್ಫ್ ಆಸ್ತಿಯಾಗಿದೆ. ಒಟ್ಟು 38 ಲಕ್ಷ ಎಕರೆ ಜಮೀನಿದೆ. ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಹಿಂದೂ ದೇವಾಲಯಗಳಿಗೆ ಸೇರಿದ 68 ಲಕ್ಷ ಎಕರೆ ಜಮೀನಿದೆ. ಜಿಲ್ಲಾಧಿಕಾರಿಗೆ ನೀಡಲಾಗಿರುವ ಅಧಿಕಾರವನ್ನು ಪ್ರಶ್ನಿಸುವಂತಿಲ್ಲ. ಸಮಿತಿಗೆ ಸಂಘ ಪರಿವಾರದವರನ್ನು ನಿಯೋಜಿಸಬಹುದು ಎಂದರು.ಮುಸ್ಲಿಂರನ್ನು ಎರಡನೇ ದರ್ಜೆ ಪ್ರಜೆಯನ್ನಾಗಿಸುವ ಮತ್ತು ಮುಂದೆ ಕ್ರಿಶ್ಚಿಯನ್ನರ ಆಸ್ತಿಗಳನ್ನು ಕಿತ್ತುಕೊಳ್ಳಲಿದ್ದಾರೆ. ಮುಸ್ಲಿಂರು ದೇಶದವರಲ್ಲ ಎಂದು ಬಿಂಬಿಸಲಾಗುತ್ತಿದೆ. ಒಡೆದಾಳುವ ನೀತಿ ಮೊದಲಿಂದಲೂ ಅನುಸರಿಸಿದ್ದಾರೆ. ಹೋರಾಟ ಮಾಡಿ ಜನರಿಗೆ ಅರಿವು ಮೂಡಿಸಬೇಕು ಎಂದರು. ಮೇ 1 ರಿಂದ ರಾಜ್ಯದ 7.5 ಲಕ್ಷ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಅಭಿನಂದನಾರ್ಹ. ಕಾಯಂ ಗೊಳಿಸುವುದರಿಂದ ಅವರ ವೇತನ 50 ಸಾವಿರಕ್ಕೆ ಹೆಚ್ಚುತ್ತದೆ.ಪ್ರಧಾನಿ ನರೇಂದ್ರ ಮೋದಿ ಚುನಾವಣೆ ವೇಳೆಯಲ್ಲಿ ಪೌರಕಾರ್ಮಿಕರ ಕಾಲು ಒರೆಸಿದರು. ಅವರ ಬದುಕಿಗೆ ಏನು ಮಾಡಿದರು? ನಾವು ಪೌರಕಾರ್ಮಿಕರ ಬದುಕು ಸರಿ ಮಾಡುವ ಕೆಲಸ ಮಾಡಿದ್ದೇವೆ ಎಂದರು.ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಕೆ. ಮಹೇಶ, ಸೇವಾದಳದ ಗಿರೀಶ, ಅಬ್ರಾರ್ ಇದ್ದರು.