ನೀರು ರಹಿತ ಶೌಚಾಲಯಕ್ಕೆ ಕಾಂಗ್ರೆಸ್‌ ವಿರೋಧ

KannadaprabhaNewsNetwork |  
Published : Aug 04, 2025, 12:15 AM IST
3ಎಚ್‌ಯುಬಿ26ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿದ್ದ ಇ ಶೌಚಾಲಯ. | Kannada Prabha

ಸಾರಾಂಶ

ಸಿಎಸ್‌ಆರ್‌ ಅನುದಾನದಡಿ ಈಗಿರುವ ಈ ಟಾಯ್ಲೆಟ್‌ಗಳನ್ನು ವಾಟರ್‌ಲೆಸ್‌ ಯೂರಿನಲ್ಸ್‌ (ಮೂತ್ರಾಲಯ) ಮತ್ತು ಶೌಚಾಲಯಗಳನ್ನಾಗಿ ಪರಿವರ್ತಿಸಲು ಪಾಲಿಕೆ ಮುಂದಾಗಿದೆ. ಆದರೆ, ಈ ಯೋಜನೆಗೆ ಇದೀಗ ಪಾಲಿಕೆ ಪ್ರತಿಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಯೋಜನೆಯ ಸಾಧಕ- ಬಾಧಕ ತಿಳಿದುಕೊಳ್ಳದೆ ಇಂತಹ ಯೋಜನೆ ರೂಪಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕೆಂದು ಅಳವಡಿಸಲಾಗಿದ್ದ ಇ ಟಾಯ್ಲೆಟ್‌ (ನೀರು ರಹಿತ)ಗಳು ಹಳ್ಳ ಹಿಡಿದಿದ್ದು, ಇದಕ್ಕೆ ವಿನಿಯೋಗಿಸಲಾಗಿದ್ದ ₹2 ಕೋಟಿ ಹಣ ಪೋಲಾದಂತಾಗಿದೆ. ಪಾಲಿಕೆ ಈಗ ಮತ್ತೆ ಇಂಥದ್ದೇ ಮತ್ತೊಂದು ಯೋಜನೆ ರೂಪಿಸಿದ್ದು, ಇದಕ್ಕೆ ವಿರೋಧ ಪಕ್ಷದ ನಾಯಕರಿಂದ ಪ್ರತಿರೋಧ ವ್ಯಕ್ತವಾಗಿದೆ.

ಸಿಎಸ್‌ಆರ್‌ ಅನುದಾನದಡಿ ಈಗಿರುವ ಈ ಟಾಯ್ಲೆಟ್‌ಗಳನ್ನು ವಾಟರ್‌ಲೆಸ್‌ ಯೂರಿನಲ್ಸ್‌ (ಮೂತ್ರಾಲಯ) ಮತ್ತು ಶೌಚಾಲಯಗಳನ್ನಾಗಿ ಪರಿವರ್ತಿಸಲು ಪಾಲಿಕೆ ಮುಂದಾಗಿದೆ. ಆದರೆ, ಈ ಯೋಜನೆಗೆ ಇದೀಗ ಪಾಲಿಕೆ ಪ್ರತಿಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಯೋಜನೆಯ ಸಾಧಕ- ಬಾಧಕ ತಿಳಿದುಕೊಳ್ಳದೆ ಇಂತಹ ಯೋಜನೆ ರೂಪಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯೋಜನೆಗೆ ಜನರ, ವಿರೋಧ ಪಕ್ಷದವರ ವಿರೋಧವಿಲ್ಲ. ಆದರೆ, ಕಳೆದ ಬಾರಿ ಈ ಟಾಯ್ಲೆಟ್‌ ಅಳವಡಿಸುವಾಗ ಮಾಡಿದ ಧಾವಂತ ಮತ್ತು ಆ ಮೇಲೆ ಅವುಗಳ ನಿರ್ವಹಣೆಯಲ್ಲಿ ವಹಿಸಿದ ನಿರ್ಲಕ್ಷ್ಯದಿಂದಾಗಿ ಈ ಯೋಜನೆಯೂ ಹಳೆಯ ಯೋಜನೆಯ ಹಾಗೆಯೇ ಹಳ್ಳಹಿಡಿಯದಿರಲಿ, ಅನುದಾನ ಪೋಲಾಗದಿರಲಿ ಎನ್ನುವ ಕಳವಳ ಕಾಡುತ್ತಿದೆ.

ಈ ಹಿಂದೆ ಧಾರವಾಡ ಮಹಾನಗರ ಪಾಲಿಕೆ ಆವರಣ, ಉಣಕಲ್ ಕೆರೆಯ ಇಂದಿರಾ ಕ್ಯಾಂಟೀನ್ ಬಳಿ ಹಾಗೂ ನವೀನ್ ಹೋಟೆಲ್ ಹತ್ತಿರ, ವಸಂತ ಕೆಫೆ, ಇಂಡಿ ಪಂಪ್ ಸರ್ಕಲ್ ಪೊಲೀಸ್‌ ಠಾಣೆ ಹತ್ತಿರ, ಜೋಳದ ಓಣಿ, ಚೆನ್ನಮ್ಮ ಸರ್ಕಲ್, ಗೋಪನಕೊಪ್ಪ, ಟೌನ್ ಹಾಲ್, ಎಂ.ಜಿ. ಪಾರ್ಕ್, ಪಿ.ಬಿ. ರೋಡ್, ಬಿಆರ್‌ಟಿಎಸ್‌ ಹೊಸೂರು ನಿಲ್ದಾಣ ಬಳಿ, ಮಂಜುನಾಥ ನಗರ ಹಾಗೂ ಕೆಇಸಿ, ಹೊಸೂರ ಬಸ್ ನಿಲ್ದಾಣ, ಚಿಟಗುಪ್ಪಿ ಆಸ್ಪತ್ರೆ ಆವರಣ ಸೇರಿದಂತೆ ವಿವಿಧೆಡೆ ಇ-ಟಾಯ್ಲೆಟ್‌ಗಳನ್ನು ಅಳವಡಿಸಿತ್ತು. ಈಗ ನಗರದಲ್ಲಿ ಈ ಇ- ಟಾಯ್ಲೆಟ್‌ಗಳನ್ನು ಅಧಿಕೃತವಾಗಿ ಬಂದ್‌ ಮಾಡಿ ಅದರಲ್ಲಿ ವಾಟರ್‌ಲೆಸ್‌ ಯೂರಿನಲ್ಸ್‌ ಅಳವಡಿಸಲು ಉದ್ದೇಶಿಸಿದೆ.

ಹಳ್ಳಹಿಡಿದಿತ್ತು ಇ -ಟಾಯ್ಲೆಟ್‌: ಇ ಟಾಯ್ಲೆಟ್‌ಗಳನ್ನು ಕ್ವಾಯಿನ್‌ ಹಾಕುವ ಮೂಲಕ ಬಳಸಬಹುದಾಗಿತ್ತು. ಎರಮ್ ಸೈಂಟಿಫಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ತಿರುವನಂತಪುರಂ ಕೇರಳ) ಇದನ್ನು ಅಳವಡಿಸಿತ್ತು. ಸಾರ್ವಜನಿಕ ಸ್ಥಳದಲ್ಲಿ ಶೌಚಗೃಹಕ್ಕೆ ಹೋಗುವವರು ಕೂಲಿಕಾರ್ಮಿಕರು, ಬಡವರು, ಜನಸಾಮಾನ್ಯರು. ಅಂಥವರಿಗೆ ಇ-ಟಾಯ್ಲೆಟ್ ಹೇಗೆ ಬಳಕೆ ಮಾಡಬೇಕೆಂಬ ಸಾಮಾನ್ಯ ತಿಳಿವಳಿಕೆ ಇರಲಿಲ್ಲ. ಇನ್ನು ಪಾಲಿಕೆ ಶೌಚಾಲಯಗಳನ್ನು ಅಳವಡಿಸಲು ತೋರಿದ ಕಾಳಜಿಯನ್ನು ಬಳಿಕ ಅವುಗಳ ನಿರ್ವಹಣೆಯಲ್ಲಿ ತೋರಲಿಲ್ಲ. ಹೀಗಾಗಿ, ಸರ್ಕಾರದ ₹2 ಕೋಟಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಇದೀಗ ವಾಟರ್‌ ಲೆಸ್ ಯೂರಿನಲ್ಸ್‌ ಅಳವಡಿಸಲು ಮುಂದಾಗಿದೆ. ಈ ಕುರಿತಂತೆ ಪಾಲಿಕೆಯಲ್ಲಿ ಯಾವುದೇ ರೀತಿಯ ಚರ್ಚೆ ಆಗಿಲ್ಲ. ಅಲ್ಲದೆ ಅದರ ಸಾಧಕ- ಬಾಧಕ ತಿಳಿದಿಲ್ಲ. ಏಕಾಏಕಿ ಅಳವಡಿಸಲು ಮುಂದಾದರೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯ ಶಂಭುಗೌಡ ಸಾಲಮನಿ ತಿಳಿಸಿದ್ದಾರೆ.

ಏನಿದು ವಾಟರ್ ಲೆಸ್ ಯೂರಿನಲ್ಸ್‌: ವಾಟರ್‌ ಲೆಸ್ ಯೂರಿನಲ್ಸ್​​ಗೆ ನೀರು ಪೂರೈಕೆಯ ಪೈಪ್‌ಲೈನ್‌ನ ಸಂಪರ್ಕ ಹಾಗೂ ಪ್ಲಶ್ ಮಾಡುವ ಅವಶ್ಯಕತೆ ಇಲ್ಲ. ಈಗಿರುವ ಯೂರಿನಲ್ಸ್ ಪಿಟ್​​ಗಳಿಗೆ ಸಂಪರ್ಕ ಕಲ್ಪಿಸಲಾಗಿರುವ ಓಲೇರ್ ಟ್ಯಾಪ್‌ನಲ್ಲಿ ಸೀಲಾಂಟ್ ಲಿಕ್ವಿಡ್ (ದ್ರವ ರೂಪದ ರಾಸಾಯನಿಕ) ಸೇರಿಸಲಾಗುತ್ತದೆ. ಈ ದ್ರವ ಗಬ್ಬುವಾಸನೆ ಹರಡುವ ಅನಿಲವನ್ನು ತಡೆಗಟ್ಟುತ್ತದೆ. ಬಳಕೆ ಮಾಡುವ ಜನಸಾಂದ್ರತೆಗೆ ಅನುಗುಣವಾಗಿ ಸೀಲಾಂಡ್ ಲಿಕ್ವಿಡ್ ಅನ್ನು 3ರಿಂದ 6 ತಿಂಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ಹುಬ್ಬಳ್ಳಿಯ ಪಾಲಿಕೆಯ ಕೇಂದ್ರ ಕಚೇರಿ, ಚಿಟಗುಪ್ಪಿ ಆಸ್ಪತ್ರೆ ಹಾಗೂ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಪರಿವರ್ತನೆ ಮಾಡಲಾಗಿದೆ. ಸುಮಾರು 125 ಯೂರಿನಲ್ಸ್ ಪಿಟ್​​ಗಳನ್ನು ಪರಿವರ್ತಿಸುವ ಉದ್ದೇಶ ಪಾಲಿಕೆಯದ್ದು.

ನೇಚರ್ ಕೇರ್ ಸಲ್ಯೂಷನ್ಸ್‌ನವರು ಇತ್ತೀಚಿಗೆ ಈಗಿರುವ ಮೂತ್ರಾಲಯಗಳನ್ನು ವಾಟರ್‌ಲೆಸ್‌ಗಳನ್ನಾಗಿ ಪರಿವರ್ತಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದರು. ಪ್ರಾಯೋಗಿಕವಾಗಿ ಪಾಲಿಕೆ ಕಚೇರಿಯಲ್ಲಿ ಈಗಾಗಲೇ ಪರಿವರ್ತಿಸಲಾಗಿದೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರಿನ ಉಳಿತಾಯವಾಗಲಿದೆ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದರು.

ಪಾಲಿಕೆ ವಿರೋಧ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ ಇಂತಹ ಯೋಜನೆಗಳನ್ನು ಜಾರಿ ಮಾಡಿ ಪಾಲಿಕೆ ಅನುದಾನ ಪೋಲು ಮಾಡುತ್ತಿದೆ. ಈಗಾಗಲೇ ಈ ಟಾಯ್ಲೆಟ್‌ ಯೋಜನೆ ಹಳ್ಳಹಿಡಿದಿದ್ದು, ಮತ್ತೆ ಇಂತಹ ಯೋಜನೆ ಜಾರಿ ಮಾಡಲು ನಾವು ಬಿಡುವುದಿಲ್ಲ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್‌ ಯಲಿಗಾರ ಹೇಳಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...