ಪ್ರಚಾರ ಸಮಿತಿಯಿಂದ ಕಾಂಗ್ರೆಸ್ ಸಂಘಟನೆ: ವಿನಯಕುಮಾರ ಸೊರಕೆ

KannadaprabhaNewsNetwork |  
Published : Aug 20, 2025, 02:00 AM IST
ಪೊಟೋ೧೯ಎಸ್.ಆರ್.ಎಸ್೧ (ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಮಾತನಾಡಿದರು.) | Kannada Prabha

ಸಾರಾಂಶ

ಪಂಚಾಯಿತಿ ಮಟ್ಟದ ಪ್ರಚಾರ ಸಮಿತಿ ರಚನೆ ಮಾಡಲು ತೀರ್ಮಾನಿಸಿದ್ದೇವೆ. ಸರ್ಕಾರದ ಸಾಧನೆ, ಪಕ್ಷವನ್ನು ಸಿದ್ಧಾಂತದ ಮೇಲೆ ಸಂಘಟಿಸಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಎಐಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.

ಶಿರಸಿ: ಕಾಂಗ್ರೆಸ್ ಪ್ರಚಾರ ಸಮಿತಿ ಕೇವಲ ಚುನಾವಣೆಗೆ ಮಾತ್ರ ಸೀಮಿತವಲ್ಲ. ರಾಜಕೀಯ ಪಕ್ಷಕ್ಕೆ ಪ್ರಚಾರ ನಿರಂತರವಾಗಿ ಇರಬೇಕು ಎಂಬ ದೃಷ್ಟಿಯಿಂದ ಎಲ್ಲ ಹಂತದ ಪದಾಧಿಕಾರಿಗಳನ್ನು ಭೇಟಿಯಾಗಿ ಪಕ್ಷ ಸಂಘಟಿಸಲಾಗುತ್ತಿದೆ ಎಂದು ಎಐಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆ, ಕರ್ತವ್ಯ, ಜವಾಬ್ದಾರಿ ನಿರೂಪಿಸಲು ಶಿರಸಿಯಿಂದ ಸಂಘಟನೆಗೆ ಚಾಲನೆ ನೀಡಲಾಗುತ್ತದೆ. ಹಾವೇರಿ, ಬೆಳಗಾವಿ, ಚಿಕ್ಕೋಡಿ, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ೮ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ. ಪಂಚಾಯಿತಿ ಮಟ್ಟದ ಪ್ರಚಾರ ಸಮಿತಿ ರಚನೆ ಮಾಡಲು ತೀರ್ಮಾನಿಸಿದ್ದೇವೆ. ಡಿ.ಕೆ. ಶಿವಕುಮಾರ ಮಾರ್ಗದರ್ಶನದಲ್ಲಿ ಡಿಜಿಟಲ್ ಯೂಥ್ ಎಂಬ ಕಾರ್ಯಕ್ರಮ ಹಮ್ಮಿಕೊಂಡು ೧ ಲಕ್ಷದ ವರೆಗೆ ಜನರ ಜೋಡಣೆ ಮಾಡಲು ಅವಕಾಶವಿದೆ. ಸರ್ಕಾರದ ಸಾಧನೆ, ಪಕ್ಷವನ್ನು ಸಿದ್ಧಾಂತದ ಮೇಲೆ ಸಂಘಟಿಸಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.

ದೇಶದಲ್ಲಿ ಪ್ರಥಮವಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲು ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕೇವಲ ರಸ್ತೆ, ಸೇತುವೆ ನಿರ್ಮಾಣ ಅಭಿವೃದ್ಧಿಯಲ್ಲ. ಜನರ ಜೀವನ ಮಟ್ಟದ ಅಭಿವೃದ್ಧಿಯೂ ಅಭಿವೃದ್ಧಿಯಾಗಿದೆ. ಕೇಂದ್ರ ಸರ್ಕಾರದ ಸರ್ವೇ ಪ್ರಕಾರ ತಲಾ ಆದಾಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜತೆ ಸೇರಿಕೊಂಡು ಪ್ರತಿ ಪಂಚಾಯಿತಿ, ತಾಲೂಕು ಮಟ್ಟದಲ್ಲಿ ಸಮಾವೇಶ ಹಮ್ಮಿಕೊಳ್ಳಲಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ೪ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧ್ಯವಿತ್ತು. ಆದರೆ ಬಿಜೆಪಿಯು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಮತಗಳ್ಳತನ ಮಾಡಿದೆ ಎಂದು ಆರೋಪಿಸಿದ ಅವರು, ದೇಶದಾದ್ಯಂತ ಮತದಾನದ ಹಕ್ಕು ಉಳಿಸುವ ಹೋರಾಟವನ್ನು ಕೇಂದ್ರದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಆದರೆ ಚುನಾವಣಾ ಆಯೋಗ ಧಮ್ಕಿ ಹಾಕುತ್ತಿದೆ. ರಾಹುಲ್ ಗಾಂಧಿ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಲಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ, ರಾಜ್ಯ ಪ್ರಚಾರ ಸಮಿತಿ ಉಪಾಧ್ಯಕ್ಷ ಮುನೀರ್, ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ಹೊನ್ನಪ್ಪ ನಾಯಕ, ಶಂಭು ಶೆಟ್ಟಿ, ಜ್ಯೋತಿ ಪಾಟೀಲ, ಜಗದೀಶ ಗೌಡ, ಸತೀಶ ನಾಯ್ಕ, ದೀಪಕ ಹೆಗಡೆ ದೊಡ್ಡೂರು, ಅಬ್ಬಾಸ ತೊನ್ಸೆ, ರಾಜು ಉಗ್ರಾಣಕರ, ನಾಗರಾಜ ಮುರ್ಡೇಶ್ವರ ಮತ್ತಿತರರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ