
ಗದಗ: ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ಜಾಗತಿಕವಾಗಿ ಭಾರತದ ಮಾನ ಹರಾಜಾಗುವಂತಾಗಿದ್ದು, ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಅಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರ ಆಡಳಿತದ ವೈಫಲ್ಯದಿಂದಾಗಿ ಭಾತರಕ್ಕೆ ಶತ್ರುಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಮೋದಿಯವರ ವಿಚಿತ್ರ ನೀತಿಯಿಂದಾಗಿ ದೇಶ ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯದಾಗಿದೆ. ವಿದೇಶಾಂಗ ನೀತಿಯನ್ನು ಬಿಟ್ಟಿರಿ. ಆರ್ಥಿಕ ನೀತಿಯು ಹಾಳಾಗಿದೆ. ನಮ್ಮ ದೇಶಕ್ಕೆ ಬರಬೇಕಾದ ಸಾಮಗ್ರಿಗಳು, ಗೌರವ ಎಲ್ಲವನ್ನು ಇಲ್ಲದಂತೆ ಮಾಡಿಬಿಟ್ಟಿದ್ದೀರಿ. ಯುದ್ಧದ ಸಂದರ್ಭವನ್ನು ಅರ್ಥಮಾಡಿಕೊಳ್ಳದೇ ಬೆಂಕಿ ಹತ್ತಿದಾಗ ಬಾವಿ ತೊಡುವ ಕೆಲಸ ಮಾಡುತ್ತಿದ್ದಿರಿ. ಅಂಬಾನಿ, ಅದಾನಿಯಂಥರ ಗೆಳೆತನದಿಂದಾಗಿ ದೇಶದ ಸಾಮಾನ್ಯ ಜನರ ಬದುಕು ಮೂರಾಬಟ್ಟೆ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದ ದ್ವಂದ್ವ ನೀತಿಯಿಂದಾಗಿ ಜಾಗತಿಕವಾಗಿ ಭಾರತ ಎಲ್ಲ ದೇಶಗಳ ಸ್ನೇಹವನ್ನು ಕಳೆದುಕೊಂಡಿದ್ದು, ಇನ್ನು ದೇಶದಲ್ಲಿ ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅಡುಗೆ ಅನಿಲ ಪೂರೈಕೆ ಮಾಡದೇ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದರು.ರೋಣ ತಾಲುಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ, ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ ತೊಂದರೆಯಾಗುತ್ತಿದೆ. ಜನರು ಕೇಂದ್ರದ ಆಡಳಿತದ ವಿರುದ್ಧ ದಂಗೆ ಏಳುವಂಥ ಆಡಳಿತವನ್ನು ನೀಡುತ್ತಿದ್ದಾರೆ. ಜನರಿಗೆ, ಹೋಟೆಲಗಳಿಗೆ ಅಡುಗೆ ಸಿಲಿಂಡರ್ ನೀಡದೇ ಜನಸಾಮಾನ್ಯರ ಬದುಕು ದುಸ್ತರಗೊಂಡಿದೆ ಎಂದರು.