ಶಿವಾನಂದ ಗೊಂಬಿ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಅಬ್ಬರ ಜೋರಾಗುತ್ತಿದೆ. ಹತ್ತಾರು ಸಮಿತಿ ಮಾಡಿ ಬಿಜೆಪಿ ಪ್ರಚಾರಕ್ಕೆ ಇಳಿದರೆ, ಕಾಂಗ್ರೆಸ್ ಕೂಡ ತಾನೇನು ಕಮ್ಮಿಯಿಲ್ಲ ಎಂದು ಅದು ಕೂಡ ಅತ್ಯಂತ ವ್ಯವಸ್ಥಿತವಾಗಿ ಪ್ರಚಾರಕ್ಕೆ ಇಳಿದಿದೆ.
1996ರಿಂದ ಈವರೆಗೆ ನಡೆದಿರುವ ಬರೋಬ್ಬರಿ 7 ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ಈ ಸಲ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದು ಪ್ರಚಾರ ನಡೆಸುತ್ತಿದೆ. ಪ್ರತಿ ಸಲ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಘೋಷಣೆ ಮಾಡುತ್ತಿದ್ದ ಕಾಂಗ್ರೆಸ್ ಈ ಸಲ ಅಹಿಂದ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಓಬಿಸಿ ಸಮುದಾಯಕ್ಕೆ ಟಿಕೆಟ್ ನೀಡಿದೆ. ಕುರುಬ ಸಮುದಾಯಕ್ಕೆ ಸೇರಿರುವ ವಿನೋದ ಅಸೂಟಿಗೆ ಟಿಕೆಟ್ ನೀಡುವ ಮೂಲಕ ತನ್ನ ಚುನಾವಣಾ ತಂತ್ರಗಾರಿಕೆಯನ್ನು ಬದಲಿಸಿಕೊಂಡಿದೆ.ಹಾಗೆ ನೋಡಿದರೆ ಬಿಜೆಪಿ ಪ್ರತಿಯೊಂದಕ್ಕೆ ಸಮಿತಿ ರಚಿಸಿ ಪ್ರಚಾರ ನಡೆಸುತ್ತಿದೆ. ಈ ಮೂಲಕ ವ್ಯವಸ್ಥಿತ ಹಾಗೂ ಸಂಘಟನಾತ್ಮಕ ಪ್ರಚಾರ ನಡೆಸುತ್ತಿದೆ. ಈ ಸಲ ಕಾಂಗ್ರೆಸ್ ಕೂಡ ಅಗತ್ಯಕ್ಕೆ ತಕ್ಕಂತೆ ಸಮಿತಿಗಳನ್ನು ರಚಿಸಿಕೊಂಡಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ವಿಧಾನಸಭೆ ಚುನಾವಣೆಯಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಇದೀಗ ಆ ಫಲಾನುಭವಿಗಳನ್ನು ಮಾತನಾಡಿಸುವ ಮೂಲಕ ಮತಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದೆ.
ಎರಡು ಜಿಪಂ ಕ್ಷೇತ್ರಗಳನ್ನು ಸೇರಿಕೊಂಡು ಮಧ್ಯ ಭಾಗದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದೆ. ಬರೋಬ್ಬರಿ 28 ಜಿಪಂ ಕ್ಷೇತ್ರಗಳಿವೆ. 14 ಸಮಾವೇಶ ನಡೆಸುವುದು. ಇದರೊಂದಿಗೆ ನಗರ ಹಾಗೂ ಪಟ್ಟಣ ವ್ಯಾಪ್ತಿಗಳಲ್ಲಿ ಬೇರೆ ಬೇರೆ ಸಮಾವೇಶ ನಡೆಸಲು ನಿರ್ಧರಿಸಿದೆ. ಜತೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಕರೆಯಿಸಿ ಪ್ರತ್ಯೇಕ ಸಮಾವೇಶ ನಡೆಸಲು ಉದ್ದೇಶಿಸಿದೆ. ಬೂತ್ ಮಟ್ಟದ, ಮಹಿಳಾ ಘಟಕ, ಯುವ ಘಟಕ ಹೀಗೆ ಎಲ್ಲ ಘಟಕಗಳು ಶ್ರಮಿಸುತ್ತಿವೆ.
ಸಮಿತಿ ರಚಿಸಿ ಪ್ರಚಾರ
- ಸಂತೋಷ ಲಾಡ್, ಚುನಾವಣಾ ಉಸ್ತುವಾರಿ ಹಾಗೂ ಸಚಿವರು