ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮನೆಮನೆಗೆ ತಲುಪಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork | Published : Dec 29, 2024 1:16 AM

ಸಾರಾಂಶ

Congress party's program should reach every door: MLA Gopalakrishna Belur

-ಮಹಿಳಾ ಕಾಂಗ್ರೆಸ್ ಪದಗ್ರಹಣ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ

------

ಕನ್ನಡಪ್ರಭ ವಾರ್ತೆ ಸಾಗರ: ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಮುಖ ಕೊಂಡಿಯಾಗಿದ್ದು, ಸರ್ಕಾರದ ಸಾಧನೆ ಜನರಿಗೆ ತಲುಪಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ಶಾಸಕ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಗಾಂಧಿಮಂದಿರದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವನ್ನು ಮನೆಮನೆಗೆ ತಲುಪಿಸುವ ಕೆಲಸವಾಗಬೇಕು ಎಂದರು.

ಮಹಿಳಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸುವ ಉದ್ದೇಶ ಹೊಂದಲಾಗಿದ್ದು, ಕನಿಷ್ಟ ೫ ಸಾವಿರ ಮಹಿಳೆಯರನ್ನು ಒಂದೆಡೆ ಸೇರಿಸಿ ಅವರ ಸಮಸ್ಯೆಗೆ ಕಿವಿಯಾಗುವ ಕೆಲಸ ಮಾಡೋಣ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಂದ ಶಾಸಕರು ೧೪೦ ಜನರಿದ್ದಾರೆ. ಕಳೆದ ೨೦ ವರ್ಷಗಳಲ್ಲಿ ಒಂದೇ ಪಕ್ಷದ ಶಾಸಕರು ಇಷ್ಟೊಂದು ಸಂಖ್ಯೆಯಲ್ಲಿ ಹೊಂದಿರುವುದು ದಾಖಲೆಯಾಗಿದೆ. ಗ್ಯಾರಂಟಿ ಯೋಜನೆ ಮತ್ತು ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳಿಂದ ಜನರು ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ ಎಂದರು.

ನೂರು ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಪಕ್ಷವಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಬಗ್ಗೆ ಸಿ.ಟಿ.ರವಿ ಆಡಿರುವ ಮಾತು ಬಿಜೆಪಿಯ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಮುಂದೆ ಎದುರಿಸಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸುವಲ್ಲಿ ಮಹಿಳಾ ಕಾಂಗ್ರೆಸ್ ಈಗಿನಿಂದಲೇ ಯೋಜನೆ ರೂಪಿಸಬೇಕು ಎಂದು ಕರೆ ನೀಡಿದರು.

ಮಹಿಳಾ ಕಾಂಗ್ರೆಸ್ಸಿನ ಪ್ರಭಾವತಿ, ಉಷಾ ಮಾತನಾಡಿದರು. ಪಕ್ಷದ ಪ್ರಮುಖರಾದ ಕಲಸೆ ಚಂದ್ರಪ್ಪ, ಸುರೇಶ್ ಬಾಬು, ಗಣಪತಿ ಮಂಡಗಳಲೆ, ಮಕ್ಬೂಲ್ ಸಾಬ್, ಲಲಿತಮ್ಮ ಎನ್., ಶಿರಿಜಾನ್, ಜ್ಯೋತಿ ಕೋವಿ, ಮಹ್ಮದ್ ಖಾಸಿಂ, ಶ್ಯಾಮಲಾ ದೇವರಾಜ್, ಕಲಾವತಿ ಇದ್ದರು.

-----

ಫೋಟೊ: ಮಹಿಳಾ ಕಾಂಗ್ರೆಸ್ ಪದಗ್ರಹಣ ಕಾರ್ಯಕ್ರಮವನ್ನು ಶಾಸಕ ಬೇಳೂರು ಉದ್ಘಾಟಿಸಿದರು

೨೮ಕೆ.ಎಸ್.ಎ.ಜಿ.೧

Share this article