ಕನ್ನಡಪ್ರಭ ವಾರ್ತೆ ಕನಕಪುರಲೋಕಸಭಾ ಚುನಾವಣೆಯ ದೃಷ್ಟಿಯಿಂದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ರವರು ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಅದರಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ಅಂಶವಿರುವುದು ದುರದೃಷ್ಟ ಹಾಗೂ ಅತ್ಯಂತ ಖಂಡನೀಯ ಎಂದು ತಾಲೂಕು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು.
ಕರ್ನಾಟಕದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಅದರ ಮಿತ್ರಕೂಟದ ಸಂಕಲ್ಪಕ್ಕೆ ನಾವೇ ಒಪ್ಪಿಗೆ ಸೂಚಿಸಿದಂತಾಗುತ್ತದೆ. ಆದ್ದರಿಂದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ತಕ್ಷಣವೇ ಮೇಕೆದಾಟು ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿ, ಡಿಎಂಕೆ ಪಕ್ಷವನ್ನು ತನ್ನ ಮೈತ್ರಿಯಿಂದ ಹೊರ ಹಾಕಲು ತಾಲೂಕು ಪ್ರಗತಿಪರ ಸಂಘಟನೆಗಳು 7 ದಿನಗಳ ಗಡುವು ನೀಡುತ್ತಿದ್ದು, ಇದನ್ನು ನಿರ್ಲಕ್ಷಿಸಿದರೆ ಎಲ್ಲಾ ಸಂಘಟನೆಗಳ ನಾಯಕರ ಸಭೆ ಕರೆದು ಕಾಂಗ್ರೆಸ್ ಪಕ್ಷದ ವಿರುದ್ಧ ಮತ ಚಲಾಯಿಸುವಂತೆ ರಾಜ್ಯವ್ಯಾಪಿ ಆಂದೋಲನ ಕೈಗೊಳ್ಳಲು ಎಚ್ಚರಿಕೆ ನೀಡಲಾಗುವುದು ಎಂದರು.
ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡ ಭಾಸ್ಕರ್, ಕೆಆರ್ ಎಸ್ ಪಕ್ಷದ ಪ್ರಶಾಂತ್ ಹೊಸದುರ್ಗ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ, ರೈತ ಘಟಕದ ನಲ್ಲಹಳ್ಳಿ ಶ್ರೀನಿವಾಸ್, ಶಿವರಾಜ್ , ಅಸ್ಗರ್ , ದುರ್ಗೇಶ್ , ಹಾಗೂ ಮಿಲ್ಟ್ರಿ ರಾಮಣ್ಣ ಉಪಸ್ಥಿತರಿದ್ದರು.