ಕನ್ನಡಪ್ರಭ ವಾರ್ತೆ ನವದೆಹಲಿರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆಗಳ ಹೊರತಾಗಿಯೂ ಪಕ್ಷಕ್ಕಾದ ಸೋಲಿನಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಇದೀಗ ಪಕ್ಷದ ಸಾಧನೆಯ ಜತೆಗೆ, ಬಿಜೆಪಿಯ ವೈಫಲ್ಯವನ್ನೂ ಸಮರ್ಥವಾಗಿ ಜನರ ಮುಂದಿಡುವಂತೆ ಮುಖಂಡರಿಗೆ ಕಿವಿಮಾತು ಹೇಳಿದೆ. ಕೇವಲ ಗ್ಯಾರಂಟಿ ನಂಬಿ ಕೂರಬೇಡಿ, ಬಿಜೆಪಿಯ ವೈಫಲ್ಯವನ್ನೂ ಜನರಿಗೆ ಎತ್ತಿ ತೋರಿಸಿ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರೇ ತಮ್ಮನ್ನು ಭೇಟಿಯಾದ ರಾಜ್ಯದ ಕೆಲ ಸಚಿವರಿಗೆ ಇಂಥದ್ದೊಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಸಂಯೋಜಕರಾಗಿ ನೇಮಕಗೊಂಡಿರುವ ಸಚಿವರನ್ನು ದೆಹಲಿಗೆ ಕರೆಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಗುರುವಾರವಷ್ಟೇ ತಂತ್ರಗಾರಿಕೆಯ ಪಾಠ ಮಾಡಿತ್ತು. ಜತೆಗೆ, ಚುನಾವಣಾ ಸಿದ್ಧತೆ ಕುರಿತು ಒಂದಷ್ಟು ಮಾರ್ಗದರ್ಶನವನ್ನೂ ನೀಡಿತ್ತು.ಇದರ ಬೆನ್ನಲ್ಲೇ ರಾಜ್ಯದಲ್ಲಿ ಆಯೋಜಿಸಿರುವ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸುವ ಸಂಬಂಧ ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಭೋಸರಾಜು, ಈಶ್ವರ ಖಂಡ್ರೆ, ವೆಂಕಟೇಶ್ ಮತ್ತಿತರರು ಶುಕ್ರವಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿದ್ದು, ಈ ವೇಳೆ ಲೋಕಸಭಾ ಚುನಾವಣೆ ವಿಚಾರ ಮತ್ತೆ ಚರ್ಚೆಗೆ ಬಂತು ಎನ್ನಲಾಗಿದೆ. ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ನಡೆದ ಈ ಭೇಟಿ ವೇಳೆ ಖರ್ಗೆ ಅವರು ರಾಜ್ಯದ ಸಚಿವರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ: