ಭಯೋತ್ಪಾದಕರು-ಅಪರಾಧಿಗಳಿಗೆ ಕೈ ರಕ್ಷಣೆ

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಜವಾಹರಲಾಲ್‌ ನೆಹರು ಕಾಲದಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ವರೆಗೂ ಭ್ರಷ್ಟಾಚಾರ ವ್ಯಾಪಿಸಿದೆ. ರಾಜೀವ ಗಾಂಧಿ ಬೋಪೋರ್ಸ್ ಹಗರಣದಲ್ಲಿ ಸರ್ಕಾರವನ್ನೇ ಕಳೆದುಕೊಂಡಿದ್ದಾರೆ.

ಕಾರವಾರ:

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭಯೋತ್ಪಾದಕ, ಅಪರಾಧ ಕೃತ್ಯ ಮಾಡಿದವರನ್ನು ರಕ್ಷಿಸುತ್ತಿದೆ. ಗ್ಯಾರಂಟಿ ಯೋಜನೆ ಬಡವರಿಗೆ ತಲುಪಿಸಲು ವಿಫಲವಾಗಿದೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.ನಗರದಲ್ಲಿ ಕೋಟಿ ಕೋಟಿ ಹಣ ಸಿಕ್ಕ ಕಾಂಗ್ರೆಸ್ ಸಂಸದ ಧೀರಜ್‌ ಸಾಹು ವಿರುದ್ಧ ಸೋಮವಾರ ಬಿಜೆಪಿ ವತಿಯಂದ ನಡೆದ ಪತ್ರಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ, ಭ್ರಷ್ಟಾಚಾರ ರಹಿತ ಗ್ಯಾರಂಟಿ ನೀಡಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ೭೦ ದಶಕಗಳ ಕಾಲ ಭ್ರಷ್ಟಾಚಾರ ಭಾರವಾಗಿದ್ದ ನಮ್ಮ ದೇಶ ಮೋದಿ ನೇತೃತ್ವದ ಸರ್ಕಾರದಲ್ಲಿ ವಿಕಸಿತ ಭಾರತವಾಗುತ್ತಿದೆ ಎಂದು ಹೇಳಿದರು.ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಜವಾಹರಲಾಲ್‌ ನೆಹರು ಕಾಲದಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ವರೆಗೂ ಭ್ರಷ್ಟಾಚಾರ ವ್ಯಾಪಿಸಿದೆ. ರಾಜೀವ ಗಾಂಧಿ ಬೋಪೋರ್ಸ್ ಹಗರಣದಲ್ಲಿ ಸರ್ಕಾರವನ್ನೇ ಕಳೆದುಕೊಂಡಿದ್ದಾರೆ. ೭೦ ವರ್ಷದಲ್ಲಿ ಭಾರತದ ಸಂಪನ್ಮೂಲ ಲೂಟಿ ಆಗಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಸಂಪೂರ್ಣ ಭ್ರಷ್ಟಾಚಾರ, ಲೂಟಿ ನಿಂತಿದೆ ಎಂದು ಅಭಿಪ್ರಾಯಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಕಾಂಗ್ರೆಸ್ ಸಂಸದ ಧೀರಜ್‌ ಸಾಹು ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ೬ ದಿನದಿಂದ ಲೆಕ್ಕಾಚಾರ ಮಾಡುತ್ತಿದ್ದು, ಈಗಲೇ ₹ ೩೫೦ ಕೋಟಿ ನಗದು ಪತ್ತೆಯಾಗಿದೆ. ರಾಹುಲ್ ಗಾಂಧಿ ಆಪ್ತ, ಮೂರನೇ ಬಾರಿಗೆ ಸಂಸದರಾದವರು. ಬಿಜೆಪಿ ವಿರೋಧಿಗಳು ಸೃಷ್ಟಿಸಿಕೊಂಡ ಐಎನ್‌ಡಿಐಎ (ಇಂಡಿಯಾ) ತಂಡವೇ ಭ್ರಷ್ಟಾಚಾರಕ್ಕಾಗಿ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಹಣ ಸಂಗ್ರಹಿಸಿ ಅಧಿಕಾರಕ್ಕೆ ಬರುವ ಹುನ್ನಾರ ನಡೆದಿದೆ. ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳನ್ನು ನೋಡಿದರೆ ಅಲಿ ಬಾಬಾ ಮತ್ತು ೪೦ ಕಳ್ಳರು ಕಥೆ ನೆನಪಾಗುತ್ತದೆ. ಇವರ ಮತ್ತಷ್ಟು ನೈಜ ಭ್ರಷ್ಟಾಚಾರ ಹೊರ ತರುತ್ತೇವೆ ಎಂದರು.ಎಂಎಲ್‌ಸಿ ಗಣಪತಿ ಉಳ್ವೇಕರ, ಗೋವಿಂದ ನಾಯ್ಕ, ಜಿಲ್ಲಾ ವಕ್ತಾರ ನಾಗರಾಜ ನಾಯಕ, ಎನ್.ಎಸ್. ಹೆಗಡೆ, ಚಂದ್ರು ಎಸಳೆ ಮೊದಲಾದವರು ಇದ್ದರು. ಸಿಬಲ್‌ ದೇಶ ವಿರೋಧಿ ವಕಾಲತ್ತುಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ರದ್ದು ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಕಪಿಲ್ ಸಿಬಲ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಕೇಂದ್ರ ಸರ್ಕಾರದ ನಿರ್ಧಾರ ಸರಿಯಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ವಿಚಾರವಾಗಿ ಜನ ಸಂಘದವರು ಕಾಶ್ಮೀರದ ಜೈಲಿನಲ್ಲಿ ಜೀವ ತ್ಯಾಗ ಮಾಡಿದ್ದರು. ಅವರ ಬಲಿದಾನ ಸಾರ್ಥಕವಾಗಿದೆ. ಸಿಬಲ್ ದೇಶ ವಿರೋಧಿಯಾಗಿ ವಕಾಲತ್ತು ಮಾಡುತ್ತಿದ್ದಾರೆ. ರಾಮಮಂದಿರ ನಿರ್ಮಾಣಕ್ಕೂ ಇದೇ ರೀತಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇನ್ನಾದರೂ ಕಾಂಗ್ರೆಸ್ ಆರ್ಟಿಕಲ್ ೩೭೦ ರದ್ದಾಗಿರುವುದನ್ನು ಗೌರವಿಸಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಮ್ಮದು ಎಂದು ಒಪ್ಪಿಕೊಳ್ಳಬೇಕು ಎಂದು ವಿಶ್ವೇಶ್ವರ ಹೆಗಡೆ ತಾಕೀತು ಮಾಡಿದರು.

ಬಿಜೆಪಿ ಮುಖಂಡರ ಮೇಲೆ ವೃಥಾ ಆರೋಪ ಮಾಡುವ ಯುಪಿಎ ಹಾಗೂ ಅದರ ಮಿತ್ರ ಪಕ್ಷಗಳು ಸಂಸದ ಧೀರಜ್‌ ಸಾಹು ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ತಮ್ಮ ನಿಲುವು ತಿಳಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದ್ದಾರೆ.

Share this article