ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರು, ಪೌರಾಯುಕ್ತರ ಕಚೇರಿ ಕೊಠಡಿಗಳಿಗೆ ಬೀಗ ಜಡಿದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮಂಗಳವಾರ ನಗರಸಭೆಯಲ್ಲಿ ಪ್ರತಿಭಟನೆ ನಡೆಸಿದರು.ಪೌರಾಯುಕ್ತರು ಕಚೇರಿ ಪ್ರವೇಶಿಸದಂತೆ ತಡೆದಿದ್ದಲ್ಲದೇ ಅಧ್ಯಕ್ಷರನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಕುಂಟಿತವಾಗಿದೆ. ಸ್ವಜನ ಪಕ್ಷಪಾತ, ಬೇಜವಾಬ್ದಾರಿ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಸಾಮಾನ್ಯ ಸಭೆ ನಡೆಸದೆ ಇರುವುದರಿಂದ ತೀವ್ರ ಆಕ್ರೋಶಗೊಂಡ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ನಗರಸಭೆ ಅಧ್ಯಕ್ಷರ, ಪೌರಾಯುಕ್ತರ ಕಚೇರಿ ಕೊಠಡಿಗಳಿಗೆ ಬೀಗ ಜಡಿದು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಬಾಯಿ ಬಡಿದುಕೊಂಡು ಅಸಮಾಧಾನ ಹೊರ ಹಾಕಿದರು.ಅಧ್ಯಕ್ಷರ ತಾರತಮ್ಯ ಆಡಳಿತ, ಬಣ ರಾಜಕೀಯದಾಟದ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸದಸ್ಯರು ಅಧ್ಯಕ್ಷರ ಆಡಳಿಕ್ಕೆ, ಬಿಜೆಪಿ ಜನ ವಿರೋಧಿ ನಡೆಗೆ ''''ಲಬೋ ಲಬೋ'''' ಎಂದು ಬೊಬ್ಬೆ ಹಾಕುತ್ತಾ ಕಬ್ಬಿಣದ ಕುರ್ಚಿಯನ್ನು ಎತ್ತಿ ಒಗೆದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ನಗರಸಭೆ ವಿಪಕ್ಷ ನಾಯಕ ಎಲ್.ಡಿ. ಚಂದಾವರಿ ಮಾತನಾಡಿ, ಸಾಮಾನ್ಯ ಸಭೆ ನಡೆಸುತ್ತಿಲ್ಲ, ನಗರಸಭೆಯಿಂದ ಅವಳಿ ನಗರಕ್ಕೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತಿವೆ, ಬಿಜೆಪಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಅಧ್ಯಕ್ಷರು ಜವಾಬ್ದಾರಿ ತೋರುತ್ತಿಲ್ಲ, ಅವರಿಗೆ ಆಡಳಿತ ನಡೆಸಲು ಆಗುತ್ತಿಲ್ಲ. ಹೀಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ನಗರಸಭೆ ಅಧ್ಯಕ್ಷರನ್ನು ಅನರ್ಹಗೊಳಿಸಬೇಕೆಂದು ಆಗ್ರಹಿಸಿದರು.ನಗರಸಭೆ ಮಾಜಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು ೫೦ ವರ್ಷ ಆಗಿದೆ. ನವೆಂಬರ್ ೩ರಂದು ಗದಗ ನಗರದದಲ್ಲಿ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಬರುತ್ತಿದ್ದಾರೆ. ಹೀಗಾಗಿ ಅವಳಿ ನಗರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದೆ. ಇದಕ್ಕಾಗಿ ಸಾಮಾನ್ಯಸಭೆ ನಡೆಸಬೇಕಿದೆ. ಆದರೆ ನಗರಸಭೆ ಅಧ್ಯಕ್ಷರು ಕರ್ನಾಟಕ ಸುವರ್ಣ ಸಂಭ್ರಮಕ್ಕೆ ಅಡ್ಡಿಪಡಿಸಲು, ಸಿಎಂ ಸಿದ್ದರಾಮಯ್ಯನವರಿಗೆ ಪೌರ ಸನ್ಮಾನ ಆಗದಂತೆ ನೋಡಿಕೊಳ್ಳಲು ಸಾಮಾನ್ಯಸಭೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಹೀಗೆ ಮುಂದುವರೆದರೆ ನಗರಸಭೆ ಬಿಜೆಪಿ ಆಡಳಿತ ವಿರುದ್ಧ, ಅಧ್ಯಕ್ಷರ ವಿರುದ್ಧ ಅಹೋ ರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ನಗರಸಭೆ ಪ್ರತಿಪಕ್ಷ ಉಪನಾಯಕ ಬರಕತ್‌ಅಲಿ ಮುಲ್ಲಾ, ಹಿರಿಯ ಸದಸ್ಯ ನಮಾಜಿ ಸೇರಿದಂತೆ ಮಹಿಳಾ ಸದಸ್ಯರು ಇದ್ದರು.