ಗ್ಯಾಸ್ ದರ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಅಂಕೋಲಾ
ಗ್ಯಾಸ್ ದರ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಜೈ ಹಿಂದ್ ವೃತ್ತದಲ್ಲಿ ರಸ್ತೆಯ ಮೇಲೆ ಒಲೆಹಚ್ಚಿ ಚಹಾ ತಯಾರಿಸಿ ಸಾರ್ವಜನಿಕರಿಗೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಬೆಲೆ ಏರಿಕೆಯ ಜೊತೆಯಲ್ಲಿ ಅಡುಗೆ ಗ್ಯಾಸ್ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ ಬೆಲೆ ಏರಿಕೆಯನ್ನು ಮಾಡುವುದರ ಮೂಲಕ ಸಾರ್ವಜನಿಕರನ್ನು ಸಂಕಷ್ಟದ ಕೂಪಕ್ಕೆ ಕೇಂದ್ರ ಬಿಜೆಪಿ ಸರ್ಕಾರ ನೂಕುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವಾಗ ಬಿಜೆಪಿಯವರು ಚಿಕ್ಕ ಪುಟ್ಟ ಏರಿಕೆಗೂ ಪ್ರತಿಭಟನೆ ನಡೆಸಿ ದಿಕ್ಕಾರ ಕೂಗುತ್ತಿದ್ದರು. ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಮಹಿಳೆಯರಿಗೆ ಒಲೆ ಉರಿಸುವುದೇ ಬೇಡವೆಂದು ಗ್ಯಾಸ್ ನೀಡಿ ಏಕಾಏಕಿ ಅಡುಗೆ ಸಿಲಿಂಡರಿಗೆ ₹60 ವಾಣಿಜ್ಯ ಸಿಲಿಂಡರಿಗೆ ₹115 ಹೆಚ್ಚಳ ಮಾಡಲಾಗಿದೆ. ಇದರಿಂದಲೇ ಬದುಕು ಕಟ್ಟಿಕೊಂಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಬೆಲೆ ಏರಿಕೆಯಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಮಟ್ಟಗಳಲ್ಲಿಯೂ ನಮ್ಮ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಂಬು ಶೆಟ್ಟಿ ಮಾತನಾಡಿದರು. ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾಂವಕರ, ಜಿಲ್ಲಾ ಘಟಕದ ಅಧ್ಯಕ್ಷ ಶಾರದ ರಾಥೋಡ್, ನಿವೃತ್ತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ್, ಸೇವಾದಳದ ಜಿಲ್ಲಾಧ್ಯಕ್ಷ ಆರ್.ಎಚ್. ನಾಯ್ಕ, ರಾಮ ಮೊಗೇರ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ನಾಯ್ಕ, ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗೂಟ್ಕರ್ ಯಲ್ಲಾಪುರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್, ಜಿಲ್ಲಾ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ, ಜಿಲ್ಲಾ ಇಂಟೆಕ್ ಅಧ್ಯಕ್ಷ ಪ್ರತ್ವಿಕೃಷ್ಣ, ಮುಖಂಡರಾದ ಪ್ರಕಾಶ್ ನಾಯಕ, ಸಲ್ಮ ಶೇರ್ಖಾನಿ, ರಾಜೇಂದ್ರ ರಾಣೆ, ಪಾಂಡುರಂಗ ಗೌಡ, ಅಮೋದ ಸಿರಸಿಕರ, ಅಭಿನಂದನ್ ಕಾರ್ವಿ, ಹೊನ್ನಪ್ಪ ನಾಯಕ್, ದೀಪಾ ನಾಯಕ ಭಾವಿಕೇರಿ, ಉದಯ ನಾಯಕ, ಶಾಂತಿ ಆಗೇರ, ಸರಸ್ವತಿ ಗುನಗಾ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮಂಜೇಶ್ವರ ನಾಯಕ ಸ್ವಾಗತಿದರು. ಜಿಪಂ ಮಾಜಿ ಸದಸ್ಯ ವಿನೋದ್ ಭಾಸ್ಗೋಡ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.