ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಸೇರಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ ಮಾತನಾಡಿ, ಅಮೆರಿಕಾದಲ್ಲಿರುವ ಭಾರತೀಯರನ್ನು ಅಕ್ರಮ ವಲಸಿಗರೆಂದು ಬಿಂಬಿಸಿ ಅವರಿಗೆ ಕೈ ಕೊಳ ಹಾಕಿ ಕರೆತರಲಾಗಿದೆ. ಗೌರವಯುತವಾಗಿ ಭಾರತಕ್ಕೆ ನಮ್ಮ ಸ್ವದೇಶಿ ವಿಮಾನದಲ್ಲಿಯೇ ಕರೆ ತರಬೇಕಿತ್ತು. ಅದನ್ನು ಮಾಡದೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಕಿಡಿಕಾರಿದರು.ಅಮೆರಿಕಾದಲ್ಲಿ ವಾಸ ಮಾಡುತ್ತಿದ್ದ ಭಾರತೀಯರಿಗೆ ಕೋಳ ಹಾಕಿ ಕರೆತರುವ ಪ್ರಮೇಯವೇನಿದೆ. ನಮ್ಮ ದೇಶದ ಪ್ರಜೆಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮರೆತಿದ್ದಾರೆ, ಕೇಂದ್ರ ಸರ್ಕಾರವು ಅನಾಗರೀಕ ಸರ್ಕಾರವಾಗಿದೆ. ಈ ಎನ್‌ಡಿಎ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದವರಿಯುವುದನ್ನು ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕಾದಲ್ಲಿ ಭಾರತೀಯರನ್ನು ಅಕ್ರಮ ನಿರಾತ್ರಿತರ ಹೆಸರಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುವುದು ಸರಿಯಾದ ಕ್ರಮವಲ್ಲ, ಅವರೂ ಮನುಷ್ಯರು ಎಂಬ ಭಾವನೆ ಏಕೆ ಬರಲಿಲ್ಲ, ಬಿಜೆಪಿ ಸರ್ಕಾರವು ಕಣ್ಣಿಲ್ಲದಂತೆ ವರ್ತಿಸಿ ವಿದೇಶಿಯರು ನಮ್ಮ ಮೇಲೆ ದಬ್ಬಾಳಿಕೆ ನಡೆಸುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಶೈಲೇಂದ್ರ, ಸಿ.ಎಂ.ದ್ಯಾವಪ್ಪ, ಶ್ರೀಧರ್, ಸಾತನೂರು ಕೃಷ್ಣ, ರಮೇಶ್, ರಾಮಕೃಷ್ಣ, ಅಂಜನಾ ಶ್ರೀಕಾಂತ್, ವೀಣಾ, ಶಕುಂತಲಾ, ಗುರುರಾಜ್, ಜಯರಾಂ, ಕೊಮ್ಮೇರಹಳ್ಳಿ ಕೃಷ್ಣ, ನಾಗೇಶ್, ವಿಜಯಕುಮಾರ್ ಭಾಗವಹಿಸಿದ್ದರು.