ಕೊಪ್ಪಳ:
ನಗರದ ಪ್ರವಾಸಿ ಮಂದಿರದಿಂದ ಮೆಣದ ಬತ್ತಿ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಅಶೋಕ ವೃತ್ತದ ವರೆಗೂ ತೆರಳಿ, ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಜಿಟಿಜಿಟಿ ಮಳೆ ಲೆಕ್ಕಿಸದೆ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಚುನಾವಣೆ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಮತಗಳ್ಳತನದ ಕುರಿತು ಪ್ರತಿಯೊಂದು ದಾಖಲೆ ನೀಡಿದ್ದರೂ ಚುನಾವಣೆ ಆಯೋಗ ತನಿಖೆಗೆ ಮುಂದಾಗುತ್ತಿಲ್ಲ. ಮತಗಳ್ಳತನ ಪ್ರಜಾಪ್ರಭುತ್ವದ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಕಿಡಿಕಾರಿದರು.ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ನಡೆದಿರುವ ಮತಗಳ್ಳತನದ ದಾಖಲೆ ಬಿಡುಗಡೆ ಮಾಡಿದ್ದರೂ ಚುನಾವಣೆ ಆಯೋಗ ಆಗಿರುವ ತಪ್ಪಿನ ಬಗ್ಗೆ ಪರಿಶೀಲನೆ ಮಾಡಲು ಮುಂದಾಗಿಲ್ಲ ಎಂದರೇ ಏನರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ ಮಾತನಾಡಿ, ದೇಶದಲ್ಲಿಯೇ ಇದು ಅತ್ಯಂತ ದುರಂತ. ರಾಹುಲ್ ಗಾಂಧಿ ಅವರು ದಾಖಲೆ ಸಮೇತ ಆರೋಪ ಮಾಡಿದರೂ ಅದನ್ನು ಪರಿಶೀಲಿಸದೆ ಇದ್ದರೇ ಹೇಗೆ ಎಂದು ಕಿಡಿಕಾರಿದರು.ಮತಗಳ್ಳತನ ಎಲ್ಲೆಲ್ಲಿ ಆಗಿದೆ. ಹೇಗೆ ಆಗಿದೆ. ಅದರಿಂದ ದುರ್ಬಳಕೆ ಹೇಗೆ ಆಗಿದೆ. ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಹೇಗೆ ಬೀರಿದೆ ಎನ್ನುವ ಅಂಕಿ-ಸಂಖ್ಯೆ ನೀಡಿದ್ದರೂ ಕೇಂದ್ರ ಸರ್ಕಾರವಾಗಲಿ, ಚುನಾವಣೆ ಆಯೋಗವಾಗಲಿ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಜನರಿಂದ ಆಯ್ಕೆಯಾಗಲು ಆಗದ ಬಿಜೆಪಿ ಚುನಾವಣೆ ಆಯೋಗದ ಮೂಲಕ ಮತಗಳ್ಳತನ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.