ಕನ್ನಡಪ್ರಭ ವಾರ್ತೆ ಹಾಸನ
ಮುಖ್ಯಮಂತ್ರಿಗಳು ಅಹಿಂದಾ ವರ್ಗಗಳ ನೇತಾರರು ಆದಂತಹ ಸಿದ್ದರಾಮಯ್ಯ ಅವರ ಮೇಲೆ ಕೇಂದ್ರ ಸರ್ಕಾರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ನಡೆಸುತ್ತಿರುವ ಕುತಂತ್ರ ರಾಜಕಾರಣವನ್ನು ವಿರೋಧಿಸಿ ಆಗಸ್ಟ್ 19ರಂದು ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು, ಅಲ್ಪಸಂಖ್ಯಾತರ ಮುಖಂಡರಾದಂತಹ ಐವನ್ ಡಿಸೋಜಾ ರವರು ಮಾಡಿದ ಭಾಷಣವನ್ನು ತಪ್ಪಾಗಿ ಕಲ್ಪನೆ ಮಾಡಿಕೊಂಡು ಅವರ ಮಾತುಗಳನ್ನು ತಿರುಚಿ ಅವರ ಮನೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ ಎಂದು ದೂರಿದರು.
ಅವರಿಗೆ ಮತ್ತು ಅವರ ಕುಟುಂಬದವರಿಗೆ ಮಾನಸಿಕವಾಗಿ ನೀಡುತ್ತಿರುವ ಹಿಂಸೆ, ಕಿರುಕುಳ ಹಾಗೂ ವ್ಯಕ್ತಿಯ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಸನ ಕಾಂಗ್ರೆಸ್ ಸಮಿತಿ ತೀವ್ರವಾಗಿ ಒತ್ತಾಯಿಸುತ್ತೇವೆ. ಹಾಗೆಯೇ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳ ಕೃತ್ಯವನ್ನು ಸಮರ್ಥಿಸಿರುವ ಮಂಗಳೂರು ಬಿಜೆಪಿ ನಾಯಕರ ಮನುಷ್ಯತ್ವ ವಿರೋಧಿ ನೀತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ದುಷ್ಕರ್ಮಿಗಳ ಬಗ್ಗೆ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಕಯ್ಯೂಂ, ಮುಖಂಡ ಅಬ್ದೂಲ್ ಸಮದ್, ಮುಜಾಯಿದ್ ಪಾಶ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ವಿ. ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಯುವ ಮುಖಂಡ ಆಲ್ವೀನ್, ಕೆಪಿಸಿಸಿ ಸದಸ್ಯ ಕೆ.ಎ. ಸಲೀಂ ಕೊಲ್ಲಹಳ್ಳಿ ಇತರರು ಉಪಸ್ಥಿತರಿದ್ದರು.