ಎಸ್‌ಐಆರ್ ರದ್ದುಪಡಿಸಲು ಆಗ್ರಹಿಸಿ ಕಾರಟಗಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork |  
Published : Oct 17, 2026, 02:00 AM IST
ಕಾರಟಗಿಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನಾ ಆಂದೋಲನ ನಡೆಯಿತು. | Kannada Prabha

ಸಾರಾಂಶ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಪಡಿಸಬೇಕು ಹಾಗೂ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾರಟಗಿಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.

ಕಾರಟಗಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಪಡಿಸಬೇಕು ಹಾಗೂ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾರಟಗಿಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.

‘ಮತ ಉಳಿಸಿ, ದೇಶ ಉಳಿಸಿ’ ಆಂದೋಲನದ ಅಂಗವಾಗಿ ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ ನೇತೃತ್ವದಲ್ಲಿ ಪುರಸಭೆಯಿಂದ ಕನಕದಾಸ ವೃತ್ತದ ವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನೀತಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ, ದೇಶದ ಕೋಟ್ಯಂತರ ಅರ್ಹ ಮತದಾರರ ಸಂವಿಧಾನಬದ್ಧ ಮತದಾನದ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯಿಂದ ನಾಗರಿಕರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎಸ್‌ಐಆರ್ ಪ್ರಕ್ರಿಯೆಯಿಂದ ಸುಮಾರು 13 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎತ್ತಿದರು. ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕಾದ ಚುನಾವಣಾ ಆಯೋಗವೇ ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆ ಉಂಟುಮಾಡಬಾರದು. ಈ ಹಿನ್ನೆಲೆಯಲ್ಲಿ ಜ್ಞಾನೇಶ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್ ಮಾತನಾಡಿ, ಎಸ್‌ಐಆರ್ ಹೆಸರಿನಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಹೆಸರುಗಳನ್ನು ಮರುಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿನ ತೊಂದರೆಗಳು ಹಾಗೂ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯ ದುರುಪಯೋಗದ ಆರೋಪಗಳು ಕಳವಳಕಾರಿಯಾಗಿವೆ ಎಂದರು.

ರೈತ ಸೇವಾ ಸಂಘದ ಮಾಜಿ ಅಧ್ಯಕ್ಷ ಶರಣಪ್ಪ ಪರಕಿ ಮಾತನಾಡಿ, ಮತದಾನ ಪ್ರಜಾಪ್ರಭುತ್ವದ ಮೂಲ ಆಧಾರವಾಗಿದೆ. ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಿ, ಜನವರಿ 2025ರಲ್ಲಿದ್ದ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು. ಪಟ್ಟಿಯಿಂದ ಕೈಬಿಟ್ಟಿರುವ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಪಾರದರ್ಶಕತೆ, ಕಾನೂನುಬದ್ಧತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ಚನ್ನಬಸಪ್ಪ ಸುಂಕದ್, ನಾಗರಾಜ ಅರಳಿ, ರುದ್ರಗೌಡ ನಂದಿಹಳ್ಳಿ, ಕೆ. ಸಿದ್ದನಗೌಡ, ಬಿ. ಶರಣಯ್ಯಸ್ವಾಮಿ, ಪರಶುರಾಮ ಸಾಲೋಣಿ, ತಿಪ್ಪೇಶ ಉಪ್ಪನಾಳ, ಸೋಮನಾಥ ದೊಡ್ಡಮನಿ, ಶರಣಯ್ಯಸ್ವಾಮಿ ಸಾಹುಕಾರ, ರಾಜಶೇಖರ ಆನೆಹೊಸೂರು, ಮಹೇಶ ಕಂದಗಲ್, ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ದೊಡ್ಡಬಸವ ಬೂದಿ, ವೀರೇಶ ಮುದುಗಲ್, ಶ್ರೀನಿವಾಸ್ ಕಾಲನಮಲ್ಲಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲಿಂಗೇಶ ಕಲ್ಗುಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ವಿಮೆ
ಆತ್ಮನಿರ್ಭರ ಭಾರತದ ನೌಕಾ ಶಕ್ತಿಗೆ ಐಎನ್‌ಎಸ್ ಸಮರ್ಥಕ್ ಬಲ