ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಅ. 23ರಂದು ನಡೆಯಲಿದ್ದು, ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಪರಿಶೀಲಿಸಿದರು.
20 ಮತಗಟ್ಟೆ, 2,714 ಮತದಾರರು: ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಒಟ್ಟು 20 ಮತಗಟ್ಟೆಗಳಿದ್ದು, 2,714 ಮತದಾರರು ನೋಂದಣಿಯಾಗಿದ್ದಾರೆ. ಅವರಲ್ಲಿ 1,845 ಪುರುಷರು ಹಾಗೂ 869 ಮಹಿಳಾ ಮತದಾರರಿದ್ದಾರೆ.
13 ಅಭ್ಯರ್ಥಿಗಳು ಕಣದಲ್ಲಿದ್ದಾರೆ: ಕಾಂಗ್ರೆಸ್ನಿಂದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶಿಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದಿಂದ ಸೈಬಣ್ಣ ಜಾಮದಾರ, ಜನತಾದಳ (ಯುನೈಟೆಡ್)ನಿಂದ ಶಂಕರ ರೆಡ್ಡಿ ಪಾಟೀಲ ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಡಾ. ಕವಿರಾಜ ನಾಗಣ್ಣ ಮೋತಕಪಲ್ಲಿ, ಟಿ.ಕೆ. ದಾಸರ, ಮಹಬೂಬ್ ಮಹ್ಮದ್ ಖಾಜಾಹುಸೇನ ವಂಟೆಳ್ಳಿ, ರಾಜಕುಮಾರ ಕೆ. ಕಲಬುರಗಿ, ರಾಜು ದೇವಪ್ಪ ಸೊನ್ನ, ಶರಣು ಪಿ. ಸುಗೂರ, ಶಶಿಧರ ಬಸವರಾಜ, ಶಿವಶಂಕರ ಅಣ್ಣಪ್ಪ ತರನಳ್ಳಿ ಹಾಗೂ ಸುರೇಶ ದಾವೀದಪ್ಪ ಕಣದಲ್ಲಿದ್ದಾರೆ.ಅ. 23ರಂದು ಮತದಾನ: ಅ. 23ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ಅ. 27ರಂದು ಮತ ಎಣಿಕೆ ನಡೆಯಲಿದ್ದು, ಅ. 31ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸೆ. 22ರಿಂದ ಅ. 31ರ ವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣೆಗೆ ಸಂಬಂಧಿಸಿದ ದೂರು ಹಾಗೂ ಮಾಹಿತಿಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದ್ದು, 08539–221895 ಸಂಖ್ಯೆಗೆ ಸಂಪರ್ಕಿಸಬಹುದು.
ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಮತದಾನಕ್ಕೆ ಸಂಬಂಧಿಸಿದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮತದಾನದ ಬಳಿಕ ಮತಪೆಟ್ಟಿಗೆಗಳನ್ನು ಪೊಲೀಸ್ ಬಂದೋಬಸ್ತ್ನಲ್ಲಿ ತಾವರಗೇರಾ ಸರ್ಕಾರಿ ಪ್ರವಾಸಿ ಮಂದಿರಕ್ಕೆ ಕೊಂಡೊಯ್ದು, ಚುನಾವಣಾಧಿಕಾರಿಗಳು ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತರ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.