ಬಜೆಟ್‌ನ ಶೇ.2ರಷ್ಟು ಅನುದಾನ ಶಿಕ್ಷಣಕ್ಕೆ ಕೇಂದ್ರ ಬಳಸುತ್ತಿಲ್ಲ

KannadaprabhaNewsNetwork |  
Published : Oct 17, 2026, 02:00 AM IST
ರಾಯರಡ್ಡಿ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಬಜೆಟ್‌ನ ಶೇ. 10ರಷ್ಟು ಮೊತ್ತವನ್ನು ಶಿಕ್ಷಣ ಇಲಾಖೆಗೆ ಬಳಸಿದರೆ, ಕೇಂದ್ರ ಸರ್ಕಾರ ಶೇ. 2ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಬಳಸುತ್ತಿಲ್ಲ. ಶಿಕ್ಷಕರು, ಪದವೀಧರರ ಹಿತಕ್ಕೆ ರಾಜ್ಯ ಸರ್ಕಾರ ಯಾವಾಗಲೂ ಬದ್ಧ.

ಹುಬ್ಬಳ್ಳಿ:

ರಾಜ್ಯ ಸರ್ಕಾರ ಬಜೆಟ್‌ನ ಶೇ. 10ರಷ್ಟು ಮೊತ್ತವನ್ನು ಶಿಕ್ಷಣ ಇಲಾಖೆಗೆ ಬಳಸಿದರೆ, ಕೇಂದ್ರ ಸರ್ಕಾರ ಶೇ. 2ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಬಳಸುತ್ತಿಲ್ಲ. ಶಿಕ್ಷಕರು, ಪದವೀಧರರ ಹಿತಕ್ಕೆ ರಾಜ್ಯ ಸರ್ಕಾರ ಯಾವಾಗಲೂ ಬದ್ಧ. ಹೀಗಾಗಿ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪಕ್ಷದಿಂದ ಸ್ಪರ್ಧಿಸಿರುವ ಮೋಹನ ಲಿಂಬಿಕಾಯಿ ಅವರಿಗೆ ಮತ ಹಾಕುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮನವಿ ಮಾಡಿದರು.

ನಗರದ ಬಿವಿಬಿ ಕ್ಯಾಂಪಸ್‌ನ ಕೆಎಲ್‌ಇ ಟೆಕ್‌ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಶ್ಚಿಮ ಪದವೀಧರರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ₹ 48 ಸಾವಿರ ಕೋಟಿ ಮೀಸಲಿಟ್ಟಿದೆ. ಇದು ರಾಜ್ಯ ಬಜೆಟ್‌ನ ಒಟ್ಟಾರೆ ವೆಚ್ಚದ ಶೇ. 10ರಷ್ಟಾಗಿದೆ. ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ ಬಜೆಟ್‌ನ ಶೇ. 2ರಷ್ಟು ಹಣವನ್ನೂ ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸುವುದಿಲ್ಲ ಎಂದು ಟೀಕಿಸಿದರು.

ಶಿಕ್ಷಣಕ್ಕೆ ಕಾಂಗ್ರೆಸ್‌ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ, ನೀಡುತ್ತಿದೆ ಎಂದ ಅವರು, ಮೋಹನ್‌ ಲಿಂಬಿಕಾಯಿ ಅವರು ಕಾನೂನು ಅಧ್ಯಯನ ಮಾಡಿದ್ದು, ಕಾನೂನು ಪ್ರಾಧ್ಯಾಪಕರಾಗಿಯೂ ಹಲವು ವರ್ಷ ಕೆಲಸ ಮಾಡಿದ್ದಾರೆ. ಶಿಕ್ಷಣ ವಲಯದ ಸಮಸ್ಯೆ, ಪದವೀಧರರ ಬೇಡಿಕೆಗಳನ್ನು ವಿಧಾನ ಪರಿಷತ್‌ನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮಂಡಿಸಿ, ಪರಿಹರಿಸುತ್ತಾರೆ. ಶಿಕ್ಷಣ ವಲಯದ ಪ್ರಗತಿಗೆ ಒತ್ತು ಕೊಟ್ಟು ಕೆಲಸ ಮಾಡುತ್ತಾರೆ. ಆದಕಾರಣ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು. ಈ ಮೂಲಕ ಕಾಂಗ್ರೆಸ್‌ನ್ನು ಬಲಪಡಿಸಬೇಕು ಎಂದರು.

ಮಾಜಿ ಸಚಿವ ಎಚ್‌.ಕೆ. ಪಾಟೀಲ ಅವರು, 24 ವರ್ಷ ಪಶ್ಚಿಮ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸಿದ್ದೇನೆ. ಶಿಕ್ಷಣ ಕ್ಷೇತ್ರದ ಸಮಸ್ಯೆ ಹಾಗೂ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಸಂಬಂಧ ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನಕ್ಕೂ ಕಾಂಗ್ರೆಸ್‌ ಶ್ರಮಿಸಿದೆ ಎಂದು ಹೇಳಿದರು.ಕಾಂಗ್ರೆಸ್‌ನಿಂದ ಮಾತ್ರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಮೋಹನ್‌ ಲಿಂಬಿಕಾಯಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಮೊದಲ ಸುತ್ತಿನಲ್ಲೇ ಆಯ್ಕೆಯಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಮುಖಂಡ ಲಿಂಗರಾಜ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಕೆಎಲ್‌ಇ ಸೊಸೈಟಿ ಅಧ್ಯಕ್ಷ ಮಹಾಂತೇಶ ಕೌಜಲಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಶ್ಯಾಮಮಲ್ಲನ ಗೌಡರು, ದೀಪಕ್‌ ಚಿಂಚೂರಿ, ಅನಂತನಾಯ್ಕ ಉಪಸ್ಥಿತರಿದ್ದರು.

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ. 23ಕ್ಕೆ ಚುನಾವಣೆ ಇದೆ. ಕ್ಷೇತ್ರದಲ್ಲಿ 97398 ಮತದಾರರಿದ್ದಾರೆ. ಬ್ಯಾಲೆಟ್‌ ಪೇಪರ್‌ನಲ್ಲಿ ತಮಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು. ಯಾವುದೇ ಕಾರಣಕ್ಕೂ ಮತಗಟ್ಟೆ ಅಧಿಕಾರಿ ನೀಡುವ ಪೆನ್ನಿನಿಂದಲೇ ಮತ ಚಲಾಯಿಸಬೇಕು. ರೋಮನ್‌ ಅಕ್ಷರದ ನಂಬರ್‌ ಒನ್‌ ಎಂದು ಬರೆಯಬೇಕು. ಮತಗಳು ಕುಲಗೆಡದಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಜಾಗೃತಿ ಮೂಡಿಸಿದರು. ಈ ಹಿಂದೆ ಈ ಕ್ಷೇತ್ರದ ಹಿತಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಈ ಸಲವೂ ಆಶೀರ್ವದಿಸಬೇಕು. ಈ ಮೂಲಕ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ವಿಮೆ
ಆತ್ಮನಿರ್ಭರ ಭಾರತದ ನೌಕಾ ಶಕ್ತಿಗೆ ಐಎನ್‌ಎಸ್ ಸಮರ್ಥಕ್ ಬಲ