ಕನ್ನಡಪ್ರಭ ವಾರ್ತೆ ಬೀದರ್
ಕಾಂಗ್ರೆಸ್ ನ ಮಂತ್ರಿಗಳು ಯಾರೂ ಚುನಾವಣೆಯಲ್ಲಿ ನಿಲ್ಲುವದಕ್ಕೆ ತಯಾರಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿಯವರ ಹವಾದಲ್ಲಿ ನಾವು ಕೊಚ್ಚಿ ಹೋಗ್ತಿವಿ ಎಂಬ ಭಯ ಅವರಲ್ಲಿದೆ. ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಪಂಚರ್ ಆಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ವ್ಯಂಗ್ಯವಾಡಿದರು.ಸೋಮವಾರ ಸಂಜೆ ಅವರ ನಿವಾಸದ ಆವರಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಹುಲ್ ಗಾಂಧಿಯವರು ತಮ್ಮ ಕ್ಷೇತ್ರದಲ್ಲಿ ನಿಲ್ಲೋಕೆ ತಯಾರಿಲ್ಲ. ಅವರು ಕೇರಳದಲ್ಲಿ ಚುನಾವಣೆಗೆ ನಿಲ್ಲೋಕೆ ಹೋಗ್ತಿದ್ದಾರೆ. ಇಂತಹ ಪರಿಸ್ಥಿತಿ ಕಾಂಗ್ರೆಸ್‌ಗೆ ಬಂದಿದೆ. ಈ ಚುನಾವಣೆ ಮೋದಿ - ರಾಹುಲ್ ಗಾಂಧಿಯವರ ಚುನಾವಣೆಯಾಗಿದೆ. 2024ರ ನಂತರ ಭಾರತ ಹೇಗಿರಬೇಕು ಎಂಬ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತಿದೆ. ದೇಶ ನರೇಂದ್ರ ಮೋದಿಯವರ ಕೈಯಲ್ಲಿ ಇರಬೇಕು ಎಂದು ದೇವೇಗೌಡರು ಕರೆ ಕೊಟ್ಟಿದ್ದಾರೆ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲಾಗಿದೆ.ಇಂದು ಭಾರತ ಉತ್ತುಂಗದಲ್ಲಿದೆ ಎಂದರೆ ಅದು ನರೇಂದ್ರ ಮೋದಿ ಅವರ ಆಡಳಿತದಿಂದ ಸಾಧ್ಯವಾಗಿದೆ. ಹಾಗಾಗಿ ನಮ್ಮ ರಾಜ್ಯದಲ್ಲಿ ಹಾಗೂ ನಮ್ಮ ಜಿಲ್ಲೆಯಲ್ಲಿ ನಾವು ಮೈತ್ರಿ ಪಕ್ಷವನ್ನು ಗೆಲ್ಲಿಸಿಕೊಂಡು ಹೋಗುವ ಕೆಲಸವನ್ನು ಮಾಡಬೇಕಾಗಿದೆ ಎಂದು ಬಂಡೆಪ್ಪ ಖಾಶೆಂಪುರ್ ಕರೆ ನೀಡಿದರು.
ಖೂಬಾರವರನ್ನು ಲೋಕಸಭೆಗೆ ಕಳಿಸುವ ಕೆಲಸ ನಮ್ಮದು:ನಾವು ಎನ್‌ಡಿಎ ಜೊತೆಗೆ ಸೇರಿದ ಬಳಿಕ ನಮ್ಮಲ್ಲಿರುವ ಒಬ್ಬರೇ ಒಬ್ಬರು ಅಲ್ಪಸಂಖ್ಯಾತರು ನಮ್ಮ ಪಕ್ಷ ಬಿಟ್ಟು ಹೋಗಿಲ್ಲ. ನಮ್ಮಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಏನೇ ಇದ್ರು ಕೂಡ ಅದನ್ನು ಮರೆತು ನಾವು ಮೈತ್ರಿ ಧರ್ಮವನ್ನು ಪಾಲಿಸುವ ಕೆಲಸ ಮಾಡಬೇಕು ಎಂದು ದೇವೇಗೌಡರು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದ ಮುಖಂಡರಿಗೆ ಕರೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಘೋಷಿತ ಅಭ್ಯರ್ಥಿ ಕೇಂದ್ರ ಸಚಿವ ಭಗವಂತ ಖೂಬಾ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಟೇಲ್ ಸೋಲಪೂರ್, ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಖೂಬಾ, ಶಾಂತಲಿಂಗ ಸಾವಳಗಿ, ವಿಜಯಕುಮಾರ ಖಾಶೆಂಪುರ್, ದೇವೆಂದ್ರ ಸೋನಿ ಸೇರಿದಂತೆ ಮತ್ತಿತರರು ಇದ್ದರು.