ಮಂಗಳ ಸೂತ್ರಕ್ಕಾಗಿ ಕಾಂಗ್ರೆಸ್‌ ಪ್ರಾಣ ಕೊಡಲೂ ಸಿದ್ಧ: ಖರ್ಗೆ

KannadaprabhaNewsNetwork |  
Published : Apr 30, 2024, 02:12 AM IST
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ, ಸೋಮವಾರ ಗುರುಮಠಕಲ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. | Kannada Prabha

ಸಾರಾಂಶ

ಕಲಬುರಗಿ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕಷ್ಣ ದೊಡಮನಿ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಂ ಸಎಂ ರೇವಂತ ರೆಡ್ಡಿ ಪ್ರಚಾರ

ಕನ್ನಡಪ್ರಭ ವಾರ್ತೆ ಯಾದಗಿರಿ

ನಿಜಾಂ ಸರ್ಕಾರದ ಆಡಳಿತದಲ್ಲೇ ಹೆಣ್ಣುಮಕ್ಕಳ ಮಾಂಗಲ್ಯಕ್ಕೆ ಕೈ ಹಾಕುವ ಧೈರ್ಯ ಆಗಿಲ್ಲ. ಸಂವಿಧಾನ ಹಾಗೂ ಪ್ರಜಾಪ್ರಭುತ್ವವಿದ್ದು, ಮಹಿಳೆಯರ ಮಂಗಳಸೂತ್ರಕ್ಕಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಣ ಕೊಡಲೂ ಸಿದ್ಧವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ, ಸೋಮವಾರ ಗುರುಮಠಕಲ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಸಭೆ ಉದ್ಘಾಟಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ 10 ವರ್ಷದ ಬಿಜೆಪಿ ಸರಕಾರದ ಆಡಳಿತದಿಂದ ದೇಶದಲ್ಲಿರುವ 22 ಜನ ಉದ್ಯಮಿಗಳು ಮಾತ್ರ ಆರ್ಥಿಕವಾಗಿ ಉದ್ಧಾರವಾಗಿದ್ದಾರೆ. ಆದರೆ ಕಾರ್ಮಿಕರು, ರೈತರು, ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸಲಿಲ್ಲ ಎಂದು ಅಕ್ರೋಶ ವ್ಯಕ್ತ ಪಡಿಸಿದರು.

ಗುರುಮಠಕಲ್ ಮತಕ್ಷೇತ್ರದ ಜನರ ಆಶೀರ್ವಾದಿಂದ ನನ್ನ ರಾಜಕೀಯ ಜೀವನ ಆರಂಭವಾಗಿದೆ. ಕಳೆದ 50 ವರ್ಷಗಳಿಂದ ಕಲ್ಯಾಣ ಕರ್ನಾಟಕ ಹಾಗೂ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಗಮನ ನೀಡಿದ್ದೇನೆ. ಈ ಕ್ಷೇತ್ರದ ಜನರಿಗೆ ಪ್ರಮುಖವಾಗಿ ಭೀಮಾನದಿಯಿಂದ ಕೆರೆಗಳಿಗೆ ನೀರು ತುಂಬಿಸುವ, ಗುರುಮಠಕಲ್ ಪಟ್ಟಣ ಸೇರಿದಂತೆ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡು ಹಳ್ಳಿಗಳ ಹಾಗೂ ತಾಂಡಾಗಳ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ ಎಂದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರ ಅಧಿಕಾರ ಅವಧಿಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಯಾಯಿತು, ಇದರಿಂದ ಹಳ್ಳಿಗಳಲ್ಲಿ ಅಪಾರ ಬದಲಾವಣೆ ಸಾಧಿಸಲಾಯಿತು, ಆಹಾರ ಭದ್ರತಾ ಕಾಯ್ದೆ ತರುವ ಮೂಲಕ ದೇಶದ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ನೀಡಲಾಯಿತು. ಅಲ್ಲದೇ ಸರ್ಕಾರ ರೈತರ 72 ಕೋಟಿ ರು.ಗಳ ಸಾಲ ಮನ್ನಾ ಮಾಡಿದೆ ಎಂದು ತಿಳಿಸಿದ ಖರ್ಗೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನಿಯವರು ಈ ಯೋಜನೆ ನಾವು ಆರಂಭಿಸಿದ್ದೇವೆ ಎಂದು ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದರು.

ಕೇಂದ್ರ ರೈಲ್ವೆ ಸಚಿವನಾಗಿದ್ದ ಸಮಯದಲ್ಲಿ ರಾಜ್ಯದಲ್ಲಿ 37 ಹೊಸ ರೈಲ್ವೆಗಳನ್ನು ಆರಂಭಿಸಿ, ದೇಶದ ಮೂಲೆ-ಮೂಲೆಗೆ ಜನರು ಹೋಗಿ ಬರಲು ಅನುಕೂಲ ಮಾಡಿಕೊಟ್ಟಿದ್ದೇನೆ. ಆದರೆ, ಕಲಬುರಗಿಯಿಂದ ಬೆಂಗಳೂರಿಗೆ ಒಂದು ರೈಲ್ವೆ ಆರಂಭಿಸಿದ ಬಿಜೆಪಿ ಸರ್ಕಾರ ಅದನ್ನು ದೊಡ್ಡ ಸಾಧನೆ ಎಂದು ಜನರ ಮುಂದೆ ಹೇಳಿಕೊಳ್ಳುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ತೆಲಂಗಾಣ ಮುಖ್ಯಮಂತ್ರಿ ರೇವಂತರಡ್ಡಿ ಮಾತನಾಡಿ, ದೇಶದ ಹಲವಾರು ರಾಜ್ಯಗಳಲ್ಲಿ ತಮ್ಮ ಸಾಮರ್ಥ್ಯದ ಮೇಲೆ ಅಧಿಕಾರಕ್ಕೆ ಬರುವ ಮೂಲಕ ಜನಪರ ಕೆಲಸ ಮಾಡುವ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸರಿಯಾಗಿ ಆರ್ಥಿಕ ಸಹಾಯ ನೀಡುತ್ತಿಲ್ಲ, ಬದಲಾಗಿ ಸರ್ಕಾರಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮೇಲೆ ಹಿಮಾಚಲ ಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಮೂಲಕ ಉತ್ತಮ ಆಡಳಿತ ನೀಡುತ್ತಿವೆ, ಆದರೆ 10 ವರ್ಷಗಳ ಪ್ರಧಾನಿ ಮೊದಿಯವರ ಆಡಳಿತದಿಂದ ಜನರು ಭ್ರಮ ನಿರಶನಗೊಂಡಿದ್ದಾರೆ. ಅಭಿವೃದ್ಧಿಗಾಗಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಪಕ್ಷಗಳ ಒಕ್ಕೂಟವನ್ನು ಜನರು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.

ಇದೇ ವೇಳೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿದರು. ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ, ಡಾ. ಚಂದ್ರಶೇಖರ ಪಾಟೀಲ್, ಕೆಪಿಸಿಸಿ ಉಪಾಧ್ಯಕ್ಷ ಶರಣಪ್ಪ ಮಟ್ಟೂರ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ