;Resize=(412,232))
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಗ್ಗಜಗ್ಗಾಟ ಜೋರಾಗಿದ್ದು, ಆಡಳಿತ ವ್ಯವಸ್ಥೆಗೆ ಅಡ್ಡಿಯಾಗಿದೆ. ಆಡಳಿತ ಪಕ್ಷದಲ್ಲಿನ ಬಣ ಬಡಿದಾಟದ ಕುರಿತು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರು, ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸುವಂತೆ ಕೈ ನಾಯಕರನ್ನು ತರಾಟೆ ತೆಗೆಕೊಂಡಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಸೋಮವಾರ ಮೈಸೂರಲ್ಲಿ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ ಅವರು, ನಾನೇ 5 ವರ್ಷ ಸಿಎಂ ಎಂದು ಎದೆ ಬಡಿದುಕೊಂಡು ಹೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು. ರೆಬಿಲಿಯನ್ ಸಿದ್ದರಾಮಯ್ಯ ವರ್ಸಸ್ ಕಾಂಪ್ರಾಮೈಸ್ ಸಿದ್ದರಾಮಯ್ಯ ನಡುವಿನ ಹೋರಾಟ ಶುರುವಾಗಿದೆ. ಮೊದಲಿನಂತೆ ರೆಬಿಲಿಯನ್ ಸಿದ್ದರಾಮಯ್ಯ ಆದ್ರೆ ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟು ಕೊಡುವುದಿಲ್ಲ. ಕಾಂಪ್ರಮೈಸ್ ಸಿದ್ದರಾಮಯ್ಯ ಆದ್ರೆ ಬಿಟ್ಟುಕೊಡುತ್ತಾರೆ. ಸಿದ್ದರಾಮಯ್ಯ ಎಷ್ಟರ ಮಟ್ಟಿಗೆ ತಮ್ಮ ಗಟ್ಟಿತನ ಉಳಿಸಿಕೊಂಡಿದ್ದಾರೆ ಎಂಬುದು ಈ ತಿಂಗಳಿನಲ್ಲಿ ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರದ ಮೇಲೆ ಕಮಿಷನ್ ಆರೋಪ ಮಾಡಿದ್ದು ಸುಳ್ಳು ಎಂಬುದು ತನಿಖಾ ವರದಿಯಿಂದ ಸಾಬೀತಾಗಿದೆ. ಈಗ ಅವರ ಸರ್ಕಾರದದಲ್ಲಿ ಎಲ್ಲಾ ಇಲಾಖೆಯಲ್ಲಿ ಎಷ್ಟೆಷ್ಟು ಕಮಿಷನ್ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ದಿನವೇ ಕಾಂಗ್ರೆಸ್ ಮನೆಯಲ್ಲಿ ಬಿರುಕು ಶುರುವಾಯಿತು ಎಂದರು.
ದಾವಣಗೆರೆಯಲ್ಲಿ ಮಾತನಾಡಿದ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರು, ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯವಾಗಿದ್ದು, ಮೆಜಾರಿಟಿ ಇದ್ದರೂ ಅತಂತ್ರ ಸ್ಥಿತಿಯಲ್ಲಿದೆ. ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಮಾಡದಷ್ಟೂ ಸಾಮರ್ಥ್ಯವಿಲ್ಲದ ದುರ್ಬಲ ಸರ್ಕಾರ ಇದು ಎಂದರು.
ದಲಿತ ಸಿಎಂ, ಸಿದ್ದರಾಮಯ್ಯ 5 ವರ್ಷ ಸಿಎಂ, ಡಿಕೆಶಿಗೆ ಮಾತು ಕೊಟ್ಟಿದೆ ಎಂದೆಲ್ಲಾ ಚರ್ಚೆಯನ್ನೆಬ್ಬಿಸಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ. ಈ ಕುರ್ಚಿ ಕಳ್ಳಾಟ ಬಿಟ್ಟು ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಹೇಳಿದ್ದೆವು. ಆದರೆ, ಶಾಸಕರ ಖರೀದಿ ಕೇಂದ್ರ ಓಪನ್ ಮಾಡಿಕೊಂಡು ಕುಳಿತಿದ್ದಾರೆ. ಶಾಸಕರನ್ನು ಖರೀದಿ ಮಾಡುವಂತೆ ಜನರು ನಿಮ್ಮನ್ನು ಆಯ್ಕೆ ಮಾಡಿಲ್ಲ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುವ ಕುರಿತು ಹೇಳಲು ನಾನು ಜ್ಯೋತಿಷಿಯಲ್ಲ. ಇವತ್ತೇ ಚುನಾವಣೆ ನಡೆದರೂ ಕಾಂಗ್ರೆಸ್ಸಿಗೆ ಸೋಲು ಖಚಿತ. ಬಹುತೇಕ ಶಾಸಕರು, ಸಚಿವರು ಸೋಲುತ್ತಾರೆ. ಬೇಕಿದ್ದರೆ ನಮ್ಮ ಸವಾಲು ಸ್ವೀಕಾರ ಮಾಡಲಿ. ಡಿಕೆಶಿ ಅವರನ್ನು ಬಿಜೆಪಿಗೆ ಸೆಳೆಯುವ ಮಾತೆಲ್ಲಾ ಊಹಾಪೋಹ ಎಂದು ಸ್ಪಷ್ಟಪಡಿಸಿದರು.
ರಮೇಶ್ ಜಾರಕಿಹೊಳಿ:ಒಂದು ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದರೆ ನಾನು ಒಪ್ಪಲ್ಲ. ಜೀವನದಲ್ಲಿ ಡಿಕೆಶಿಯನ್ನು ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಆ ಸಂದರ್ಭ ಸೃಷ್ಟಿಯಾದರೆ, ಆಗ ದೇವರು ಏನು ಬುದ್ಧಿ ಕೊಡುತ್ತಾನೋ ನೋಡೋಣ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಯಾರನ್ನೂ ಬೇಕಾದರೂ ಸಿಎಂ ಮಾಡಲಿ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಇವತ್ತಿನ ಸಂಘರ್ಷದಲ್ಲಿ ಬಿಜೆಪಿ ತಟಸ್ಥವಾಗಿ ಉಳಿಯಬೇಕು. ಕಾಂಗ್ರೆಸ್ ನಾಯಕರು ಬೇಕಾದರೆ ಕಚ್ಚಾಡಲಿ, ಬಡಿದಾಡಲಿ. ಅವರ ಹೊಲಸು ನಮ್ಮ ಮೈಮೇಲೆ ಹಾಕಿಕೊಳ್ಳಬಾರದು. ಪೂರ್ಣ ಪ್ರಮಾಣದ ಸರ್ಕಾರ ಅಧಿಕಾರಕ್ಕೆ ತರಲು ಚುನಾವಣೆಗೆ ಹೋಗುವುದು ಒಳ್ಳೆಯದು ಎಂದರು.
ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿಯ ಸರ್ಕಾರ ಪ್ರಶ್ನೆಯೇ ಬರಲ್ಲ. ನಂಬರ್ ಗೇಮ್‌ನಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಡಿಕೆಶಿ ಕಡೆ ಶಾಸಕರ ಸಂಖ್ಯೆ ಕಡಿಮೆ ಇದ್ದು, ಸುಮ್ಮನೇ ಟಿವಿಯಲ್ಲಿ ಅಷ್ಟು ಇಷ್ಟು ಅಂತಾ ತೋರಿಸುತ್ತಿದ್ದಾರೆ. 50 ಶಾಸಕರನ್ನು ತೋರಿಸಿದರೆ ಇವತ್ತೆ ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡೋಣ ಎಂದು ಸವಾಲು ಹಾಕಿದರು.ರಾಜ್ಯ ಬಿಜೆಪಿಯಲ್ಲಿ ಡಿಸೆಂಬರ್‌ನಲ್ಲಿ ಕ್ರಾಂತಿ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ನಾವು ಏನು ಹೇಳಬೇಕೋ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಹೇಳಿದ್ದೇವೆ. ಹೇಗೆ ಡಿಕೆಶಿಯನ್ನು ನಾವು ಒಪ್ಪುವುದಿಲ್ಲವೋ, ವಿಜಯೇಂದ್ರನನ್ನು ಅದೇರೀತಿ ಒಪ್ಪಲ್ಲ ಎಂದು ಸ್ಪಷ್ಟಪಡಿಸಿದರು.