ಹಿರೇಕೆರೂರು: ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿತದಿಂದ ಹಾಗೂ ಇದುವರೆಗೂ ಬೆಳೆ ಪರಿಹಾರವೂ ಸಹ ಬರದೇ ಇರುವ ಕಾರಣ ಇದರಿಂದ ತಾಲೂಕಿನ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ರೈತರಿಗೆ ಇಷ್ಟು ಅನ್ಯಾಯವಾಗುತ್ತಿದ್ದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ. ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳದ ಖರೀದಿ ಕೇಂದ್ರ ತೆರೆಯುತ್ತಿಲ್ಲ. ದಿನೇ ದಿನೇ ರೈತ ಸಮೂದಾಯ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ಕಾಂಗ್ರೆಸ್ ಸರ್ಕಾರವು ರೈತರ ಸಂಕಷ್ಟಕ್ಕೂ ಕಿವಿಗೊಡದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ವಾಗ್ದಾಳಿ ನಡೆಸಿದರು. ಪಟ್ಟಣದಲ್ಲಿ ತಾಲೂಕಿನ ರೈತ ಬಾಂಧವರು ಮತ್ತು ಬಿಜೆಪಿ ವತಿಯಿಂದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಹಾಗೂ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸೋಮವಾರ ಹಮ್ಮಿಕೊಂಡಿದ್ದ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.ಸರ್ಕಾರ ರೈತರ ಕಣ್ಣೀರನ್ನೇ ರಾಜಕೀಯ ಲಾಭದ ಲೆಕ್ಕಾಚಾರಕ್ಕೆ ಬಳಸುತ್ತಿದೆ. ರೈತರ ಬದುಕು ಹಾಳಾಗಿರುವಾಗ ಅಧಿಕಾರ ಹಂಚಿಕೆಯ ಲೆಕ್ಕದಲ್ಲಿರುವುದು ಅಮಾನವೀಯ. ಪಕ್ಷದ ಆಂತರಿಕ ಗೊಂದಲಗಳ ಕಚ್ಚಾಟದಲ್ಲಿ ಸಿಕ್ಕಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಲಕ್ಷಾಂತರ ರೈತರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ. ರೈತರ ಸಂಕಷ್ಟಕ್ಕೆ ಧಾವಿಸದಿರುವದು ಸರ್ಕಾರದ ಅಸಡ್ಡೆ ಮನೋಭಾವಕ್ಕೆ ಸಾಕ್ಷಿಯಾದಂತಿದೆ ಎಂದರು. ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ತೀವ್ರ ಕುಸಿದಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ತೆರೆಯಬೇಕು. ಪ್ರತಿ ಬಾರಿ ರೈತರ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ಖರೀದಿದಾರರು ದಿಢೀರ್ ಬೆಲೆ ಕಡಿಮೆ ಮಾಡುತ್ತಾರೆ. ರೈತರ ಹೆಸರಿನಲ್ಲಿ ವರ್ತಕರು ಲಾಭ ಪಡೆಯುತ್ತಾರೆ. ರೈತರಿಗೆ ಯಾವುದೇ ಲಾಭ ಸಿಗುವುದಿಲ್ಲ. ಪ್ರಸಕ್ತ ವರ್ಷದ ಮುಂಗಾರು ಹಾಗೂ ಹಿಂಗಾರಿನ ನಿರಂತರ ಮಳೆಯಿಂದ ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಭಾರಿ ನಷ್ಟ ಉಂಟು ಮಾಡಿದೆ. ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ದೊರೆಯದೆ ಇರುವುದರಿಂದ ಸಂಕಷ್ಟ ಎದುರಿಸುವಂತಾಗಿದೆ. ತಕ್ಷಣ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು. ವಿಳಂಬ ಮುಂದುವರೆದರೆ ಬೀದಿಗೆ ಇಳಿದು ರೈತರ ಪರ ಹೋರಾಟ ನಡೆಸುತ್ತೇವೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಿಲುವು ಮತ್ತು ಅಸಡ್ಡೆ ಮನೋಭಾವವನ್ನು ಜನರ ಮುಂದೆ ಬಯಲು ಮಾಡುತ್ತೇವೆ ಎಂಬುದಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪಟ್ಟಣದ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ರ‍್ಯಾಲಿ ನಡೆಸಿ ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ದೇವರಾಜ ನಾಗಣ್ಣನವರ, ಮುಖಂಡರಾದ ಪಾಲಕ್ಷಗೌಡ ಪಾಟೀಲ, ಸೃಷ್ಟಿ ಪಾಟೀಲ, ಎನ್.ಎಂ. ಈಟೇರ, ರವಿಶಂಕರ ಬಾಳಿಕಾಯಿ, ಡಿ.ಸಿ. ಪಾಟೀಲ, ಆರ್.ಎನ್.ಗಂಗೋಳ, ಗುರುಶಾಂತ ಎತ್ತಿನ ಹಳ್ಳಿ, ಲಿಂಗರಾಜ ಚಪ್ಪರದಳ್ಳಿ, ಪರಮೇಶಪ್ಪ ಹಲಗೇರಿ, ಹರೀಶ ಕಲಾಲ್, ರುದ್ರಗೌಡ ನೀಲನಗೌಡ್ರ, ಬಿ.ಟಿ. ಚಿಂದಿ, ಆನಂದಪ್ಪ ಹಾದಿಮನಿ, ಬಸವರಾಜ ಭರಮಗೌಡ್ರ, ಮಹ್ಮದ್ ಹುಸೇನ್ ವಡ್ಡಿನಕಟ್ಟಿ, ಉಮೇಶ ಬಣಕಾರ, ಮಂಜು ಹೊಸಗೌಡ್ರ, ಹುಚ್ಚನಗೌಡ ಕಬ್ಬಕ್ಕಿ, ಗೀತಾ ದಂಡಗೀಹಳ್ಳಿ, ಲತಾ ಬಣಕಾರ, ಹನುಮಂತಪ್ಪ ಗಾಜೇರ್, ಅಜ್ಜಯ್ಯಸ್ವಾಮಿ ಆರಾಧ್ಯಮಠ, ರುದ್ರಗೌಡ ಪಾಟೀಲ, ಮಹೇಶ ಭರಮಗೌಡ್ರ, ಶಿವಶಂಕರ ಕುಸಗೂರ, ಜಗದೀಶ ದೊಡ್ಡಗೌಡ್ರ, ನಾಗರಾಜ ಹಿರೇಮಠ, ಹನುಮಂತಪ್ಪ ಮೇಗಳಮನಿ, ಮನೋಹರ ವಡ್ಡಿನಕಟ್ಟಿ, ಬಸವರಾಜ ದೊಡ್ಡಗೌಡ್ರ, ಬಿ.ಆರ್.ಪುಟ್ಟಣ್ಣನವರ, ರಮೇಶ ಬೆನಕನಕೊಂಡ,ಕುಬೇರಪ್ಪ ಗೌಡ್ರ ,ದುರಗೇಶ ತಿರಕಪ್ಪನವರ್, ಅಶೋಕ ಬುದ್ನಿ, ಗಂಗಾಧರ್ ಬೋಗೆರ, ಹನುಮಗೌಡ ಜೋಗಿಹಳ್ಳಿ, ಪುನಿತ ಬಣಕಾರ ಇದ್ದರು.