ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ವಶವಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರು ೭ ಹಾಗೂ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಬೆಂಬಲಿತ ಸದಸ್ಯರು ೭ ಮಂದಿ ಸಮಬಲವಿದ್ದರೂ ಅಧಿಕಾರಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಶಾಸಕ ಪಿ.ರವಿಕುಮಾರ್ ವಹಿಸಿದ ಮಧ್ಯಸ್ಥಿಕೆ ಯಶಸ್ವಿಯಾಗಿ ಅಧಿಕಾರ ಕಾಂಗ್ರೆಸ್ ಪಾಲಾಗುವಂತಾಯಿತು.ಪಿಎಲ್‌ಡಿ ಬ್ಯಾಂಕ್ ಒಟ್ಟು ೧೪ ಮಂದಿ ನಿರ್ದೇಶಕರು ಹಾಗೂ ಒಬ್ಬ ನಾಮ ನಿರ್ದೇಶಕ ಸ್ಥಾನ ಹೊಂದಿದ್ದು, ಬ್ಯಾಂಕ್‌ನ ನಿರ್ದೇಶಕರ ಚುನಾವಣೆ ಜನವರಿ ೨ ರಂದು ನಡೆದಿತ್ತು. ಕಾಂಗ್ರೆಸ್ ಬೆಂಬಲಿತರು ಒಟ್ಟು ೭ ಸ್ಥಾನ ಹಾಗೂ ಜೆಡಿಎಸ್-ಬಿಜೆಪಿ ಬೆಂಬಲಿತರು ೭ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದರು.
ಈ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಅಧಿಕಾರಕ್ಕಾಗಿ ಹೋರಾಟ ನಡೆದಿತ್ತು. ಜೆಡಿಎಸ್‌ನವರು ಅಧಿಕಾರದ ಆಮಿಷವೊಡ್ಡಿ ಕಾಂಗ್ರೆಸ್‌ನ ಇಬ್ಬರನ್ನು ಸೆಳೆಯುವ ಪ್ರಯತ್ನಕ್ಕಿಳಿದಿದ್ದರು. ಇದರಿಂದ ಎಚ್ಚೆತ್ತ ಶಾಸಕ ಪಿ.ರವಿಕುಮಾರ್ ಕಾಂಗ್ರೆಸ್‌ಗೆ ಅಧಿಕಾರ ಕೈಬಿಟ್ಟುಹೋಗದಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಭೆ ಕರೆದು ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾದರು.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಉರಮಾರಕಸಲಗೆರೆ ಮರೀಗೌಡ ಹಾಗೂ ಉಪಾಧ್ಯಕ್ಷರಾಗಿ ಆಲಕೆರೆ ಕೃಷ್ಣೇಗೌಡ ಚುನಾಯಿತರಾದರು.
ಚುನಾವಣಾ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉರಮಾರಕಸಲಗೆರೆ ಮರೀಗೌಡ ಹಾಗೂ ಶಿವಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣೇಗೌಡ ಹಾಗೂ ದಿವ್ಯ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದ ಬಳಿಕ ಉರಮಾರ ಕಸಲಗೆರೆ ಮರೀಗೌಡ ೮ ಮತ ಪಡೆದರೆ ಶಿವಲಿಂಗೇಗೌಡ ಅವರು ೭ ಮತ ಪಡೆದು ಪರಾಭವಗೊಂಡರು.ಕಾಂಗ್ರೆಸ್ ಬೆಂಬಲಿತರ ಪರವಾಗಿ ಮರೀಗೌಡ, ಕೃಷ್ಣೇಗೌಡ, ಯು.ಸಿ.ಶಿವಕುಮಾರ್, ಎಚ್.ಸಿ.ಶಿವಲಿಂಗೇಗೌಡ, ಬೇಲೂರು ಸೋಮಶೇಖರ್, ಬೋರೇಗೌಡ, ಎಂ.ಯೋಗೇಶ್, ನಿಂಗಮ್ಮ ಮತ ಚಲಾಯಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಸಿದ್ದ ಕೃಷ್ಣೇಗೌಡ ೮ ಮತಗಳನ್ನು ಪಡೆದರೆ ದಿವ್ಯ ಅವರು ೭ ಮತಗಳನ್ನು ಪಡೆದು ಪರಾಭವಗೊಂಡರು.ಉರಮಾರಕಸಲಗೆರೆ ಮರೀಗೌಡ ಹಾಗೂ ಕೃಷ್ಣೇಗೌಡ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ತಾಪಂ ಇಒ ಆದ ಚುನಾವಣಾ ಅಧಿಕಾರಿ ಎಂ.ಎಸ್.ವೀಣಾ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು, ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಕೈಸೇರಿದೆ. ಸಿಕ್ಕ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಅವಕಾಶ ದೊರಕಿದೆ. ಬ್ಯಾಂಕ್ ಅಭಿವೃದ್ಧಿಗೆ ೧೦ ಲಕ್ಷ ರು. ಅನುದಾನ ನೀಡಲಾಗುವುದು. ಹಂತ ಹಂತವಾಗಿ ಆಸಕ್ತ ನಿರ್ದೇಶಕರನ್ನು ವರಿಷ್ಠ ಹುದ್ದೆಗೆ ಆಯ್ಕೆ ಆಡಲಾಗುವುದು. ಎಲ್ಲ ನಿರ್ದೇಶಕರು ಬ್ಯಾಂಕಿನ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.ಸಾಲ ನೀಡಿಕೆ ಮತ್ತು ವಸೂಲಾತಿ ಎರಡರಲ್ಲೂ ಬ್ಯಾಂಕ್ ಪ್ರಗತಿ ಸಾಧಿಸಬೇಕು. ಪಿಎಲ್‌ಡಿ ಬ್ಯಾಂಕ್ ಇತರೆಲ್ಲಾ ಬ್ಯಾಂಕುಗಳಿಗಿಂತ ಮಾದರಿಯಾಗಿ ಮುನ್ನಡೆಯಬೇಕು. ಅದಕ್ಕಾಗಿ ನಿರ್ದೇಶಕರು ಕೈಜೋಡಿಸುವಂತೆ ತಿಳಿಸಿದರು.