ಮಲೆಯಾಳಿ ಸಿನಿಮಾ ಚಿತ್ರೀಕರಣ ಖಂಡಿಸಿ ಪ್ರತಿಭಟನೆ

KannadaprabhaNewsNetwork | Published : Apr 10, 2025 1:03 AM

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಮಲೆಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತಸಂಘ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಮಲೆಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ರೈತಸಂಘ ಪ್ರತಿಭಟನೆ ನಡೆಸಿದರು.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಅರಣ್ಯ ಚೆಕ್‌ ಪೋಸ್ಟ್‌ ಬಳಿ ಜಿಲ್ಲಾ ರೈತಸಂಘದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು. ಸೂಕ್ಷ್ಮ ಪರಿಸರ ವಲಯದಲ್ಲಿ ಮಲೆಯಾಳಂ ಸಿನಿಮಾಗೆ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ಖಂಡನೀಯ. ಅನುಮತಿ ನೀಡಿದ್ದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.

ಎಸಿಎಫ್‌ ಎನ್.ಪಿ.ನವೀನ್‌ ಕುಮಾರ್‌ ಹಾಗೂ ಆರ್‌ಎಫ್‌ ಒ ಬಿ.ಎಂ.ಮಲ್ಲೇಶ್ ಮಾತನಾಡಿ, ಇದು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಒಂದು ಲಕ್ಷ ಹಣ ಕಟ್ಟಿದ್ದಾರೆ, ಎಲ್ಲಾ ನಿಯಮದ ಪ್ರಕಾರವೇ ಚಿತ್ರೀಕರಣ ನಡೆದಿದೆ ಎಂದು ಪ್ರತಿಭಟನಾಕಾರರ ಮನವೊಲಿಸಿದರು. ರೈತಸಂಘದ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ಸಚಿವರ ಮಾತಿಗೆ ಮಣಿದು ಚಿತ್ರೀಕರಣ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಣದಾಸೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಇದು ಸರಿಯಲ್ಲ ಎಂದರು. ಪ್ರತಿಭಟನೆಯಲ್ಲಿ ರೈತಸಂಘದ ಮಹೇಶ್‌, ಪ್ರಕಾಶ್‌ ಮಹೇಶ್‌, ಲೋಕೇಶ್‌ ಸೇರಿದಂತೆ ಹಲವರಿದ್ದರು.

ಸರ್ಕಾರದ ನಡೆಗೆ ಕಾವಲು ಪಡೆ ಖಂಡನೆ

ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳ ಚಲನಚಿತ್ರ ಚಿತ್ರೀಕರಣ ಮಾಡಲು ಅನುಮತಿ ನೀಡಿದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಕಾವಲು ಪಡೆ ತೀವ್ರವಾಗಿ ಖಂಡಿಸಿದೆ. ಅತೀ ಸೂಕ್ಷ್ಮ ಪರಿಸರ ವಲಯದಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಖಂಡನೀಯ. ಅಲ್ಲದೆ ಕೇರಳದ ಲಾಬಿಗೆ ಮಣಿದು ಅನುಮತಿ ಕೊಟ್ಟಿರುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಕ್ಷ ಎ.ಅಬ್ದುಲ್‌ ಮಾಲೀಕ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Share this article